ಭಾರತದ ಆಡಳಿತ ವ್ಯವಸ್ಥೆ

ಭಾರತದ ಸುವರ್ಣಯುಗವೆಂದು ಹೆಸರಾದ ಗುಪ್ತ ಸಾಮ್ರಾಜ್ಯದ ಆಡಳಿತ ವ್ಯವಸ್ಥೆ ಮತ್ತು ಚಂದ್ರಗುಪ್ತಮೌರ್ಯನ ಪ್ರಧಾನಿ ಕೌಟಲ್ಯನ ಅರ್ಥಶಾಸ್ತ್ರ ಗ್ರಂಥದಲ್ಲಿ ದೊರಕುವ ಆಡಳಿತ ವ್ಯವಸ್ಥೆಯ ವಿವರಣೆ ಗಮನಾರ್ಹವಾದವು. ಮುಂದೆ ಮುಗಲ್ ಸಾಮ್ರಾಜ್ಯದ ಅಕ್ಬರನ ಕಾಲದ ಆಡಳಿತ ಹೆಸರಾದದ್ದು. ಅಶೋಕನಂಥ ಅನೇಕ ಚಕ್ರವರ್ತಿಗಳೂ ಪ್ರಸಿದ್ಧ ರಾಜರುಗಳೂ ಈ ನಾಡಿನಲ್ಲಿ ಆಡಳಿತ ನಡೆಸಿದ್ದಾರೆ. ಭಾರತ ತನ್ನ ವ್ಯವಸ್ಥಿತ ಆಡಳಿತಕ್ಕೆ, ನೆರೆಹೊರೆ ದೇಶಗಳೊಡನೆ ಅದರ ಸುಸಂಸ್ಕøತ ರಾಜಕೀಯ ಸಂಬಂಧಕ್ಕೆ ಪ್ರಸಿದ್ಧವಾಗಿದೆ. ಪ್ರಸ್ತುತ ಲೇಖನದಲ್ಲಿ ಇಂದಿನ ಆಡಳಿತ ವ್ಯವಸ್ಥೆಯನ್ನು ಸಂಕ್ಷಿಪ್ತವಾಗಿ ವಿವರಿಸಿದೆ. ಭಾರತದ ಇಂದಿನ ಆಡಳಿತ ವ್ಯವಸ್ಥೆಯನ್ನು ಸಂಕ್ಷಿಪ್ತವಾಗಿ ವಿವರಿಸಿದೆ. ಭಾರತದ ಇಂದಿನ ಆಡಳಿತ ವ್ಯವಸ್ಥೆಯ ಮೇಲೆ ಪಾಶ್ಚಾತ್ಯರ, ಹೆಚ್ಚಾಗಿ ಬ್ರಿಟಿಷರ ಪ್ರಭಾವವಿದೆ. ಇದರ ಬಹುಪಾಲು ಬೇರುಗಳು ಬೆಳೆದುದು ಬ್ರಿಟಿಷ್ ಆಡಳಿತ ಕಾಲದಲ್ಲಿ.
ಭಾರತದ ಒಕ್ಕೂಟ ಆಡಳಿತ ವ್ಯವಸ್ಥೆಯಲ್ಲಿ ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿವೆ. ರಾಜ್ಯಗಳ ಒಳಾಡಳಿತ ಘಟಕಗಳಾದ ವಿಭಾಗ, ಜಿಲ್ಲೆ, ತಾಲ್ಲೂಕು, ಹೋಬಳಿ, ನಗರ, ಗ್ರಾಮ ಮತ್ತು ಸ್ಥಳೀಯ ವಿವಿಧ ಸರ್ಕಾರಿ ಸಂಸ್ಥೆಗಳ ಆಡಳಿತ ವ್ಯವಸ್ಥೆಯಿದೆ. ನೀತಿ ನಿರೂಪಣಾ ವ್ಯವಸ್ಥೆ, ಕಾರ್ಯನಿರ್ವಹಣೆ, ಸಿಬ್ಬಂದಿ ಮತ್ತು ನಿಯಂತ್ರಣ ಇವು ಆಡಳಿತ ವ್ಯವಸ್ಥೆಯ ಮುಖ್ಯ ಅಂಗಗಳು.

ಕೇಂದ್ರಾಡಳಿತ : ಭಾರತದ ವಿವಿಧ ಮತ, ಧರ್ಮ, ಸಂಸ್ಕøತಿ ಮತ್ತು ಭಾಷೆಗಳು ಕೇಂದ್ರಾಡಳಿತದ ಮೇಲೆ ಪ್ರಭಾವ ಬೀರಿವೆ. ಆಡಳಿತದಲ್ಲಿ ಪ್ರಾಂತೀಯ ಭಾಷೆ, ನೇಮಕಾತಿ ಮತ್ತು ಬಡ್ಡಿಗಳಲ್ಲಿ ಮೀಸಲಾತಿ ಇವುಗಳ ಬಗ್ಗೆ ಸಮಸ್ಯೆಗಳಿವೆ. ಆಡಳಿತದ ಗುರಿ ಬಡತನ ನಿರ್ಮೂಲನ ಮತ್ತು ಯೋಜಿತ ಅಭಿವೃದ್ಧಿಗಳ ಬಗ್ಗೆ ಹೆಚ್ಚು ಗಮನ, ಭಾರತದ ಆಡಳಿತಕ್ಕೆ 1951 ಜನವರಿ 26ರಂದು ಜಾರಿಗೆ ಬಂದ ಹೊಸ ಸಂವಿಧಾನ ಒಂದು ಚೌಕಟ್ಟು ಒದಗಿಸಿದೆ. ಇದರ ಪ್ರಕಾರ ಭಾರತ ಒಂದು ಪ್ರಜಾಪ್ರಭುತ್ವವಾದಿ, ಜಾತ್ಯತೀತ, ಸಮಾಜವಾದಿ ಮತ್ತು ಒಕ್ಕೂಟ ಗಣರಾಜ್ಯವಾಗಿದೆ. ಸಂವಿಧಾನದ ಪ್ರಕಾರ ಮತ್ತು ಸಾರ್ವತ್ರಿಕ ನ್ಯಾಯ ದೊರಕಿಸುವುದೇ ಭಾರತ ರಾಜಕೀಯದ ಮತ್ತು ಆಡಳಿತದ ಗುರಿಗಳಾಗಿವೆ. ಇವೆಲ್ಲವೂ ಭಾರತದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಮೂರು ವಿಭಾಗಗಳಲ್ಲಿ ಅಡಕವಾಗಿವೆ.

ಸಂಸದೀಯ ಪ್ರಜಾಸತ್ತೆ ಚಾಲ್ತಿಯಲ್ಲಿರುವ ಭಾರತದಲ್ಲಿ ರಾಷ್ಟ್ರದ ನೀತಿ ನಿರೂಪಣೆ ರಾಜ್ಯಾಂಗಬದ್ಧವಾಗಿ ಸಂಸತ್ತಿನಲ್ಲಿ ನಿಹಿತವಾಗಿದೆ. ಆಡಳಿತಕ್ಕೆ ಬೇಕಾದ ಸಕಲ ಶಾಸನ ನೀತಿಗಳನ್ನು ರೂಪಿಸುವಲ್ಲೂ ಇವೆಲ್ಲಕ್ಕೂ ಬೇಕಾದ ಹಣಕಾಸು ಒದಗಿಸುವುದರಲ್ಲೂ ಸಂಸತ್ತಿನದೇ ಅಂತಿಮ ನಿರ್ಧಾರ. ವಾಸ್ತವಿಕವಾಗಿ ನಮ್ಮ ಸಂಸದೀಯ ಪ್ರಜಾಸತ್ತೆ ಸಂಪುಟೀಯ ಸರ್ಕಾರ (ಕ್ಯಾಬಿನೆಟ್) ಪದ್ಧತಿಯುಳ್ಳದ್ದು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಧಾನ ಮಂತ್ರ್ಯಾತ್ಮಕ ಸರ್ಕಾರ ಪದ್ಧತಿಯಾಗಿ ಆಡಳಿತದ ನೀತಿ ಮತ್ತು ಅಧಿಕಾರ ನಿರೂಪಣೆಯಲ್ಲಿ ಕೇಂದ್ರ ಸಂಪುಟ ಮತ್ತು ಪ್ರಧಾನ ಮಂತ್ರಿಗಳದೇ ಮೇಲುಗೈ ಆಗಿದೆ. ಆದರೂ ಲೋಕಸಭೆ, ರಾಜ್ಯಸಭೆಗಳೆಂಬ ದ್ವಿಸದನಗಳನ್ನು ಹೊಂದಿರುವ ಸಂಸತ್ತಿನ ಸಭೆ ಮತ್ತು ಸಮಿತಿಗಳಲ್ಲಿ ಆಡಳಿತವನ್ನು ನಿರ್ದೇಶಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಸಾಮಾನ್ಯವಾಗಿ ಮಂತ್ರಿ ಮಂಡಳವೇ ಆಡಳಿತದ ಕೇಂದ್ರ ಮೂಲ.

ರಾಷ್ಟ್ರಾಧ್ಯಕ್ಷರು ಮತ್ತು ಸಚಿವರು: ಕಾರ್ಯಾಂಗದ ಪ್ರಮುಖರಾದ ರಾಷ್ಟ್ರಾಧ್ಯಕ್ಷರು ಆಡಳಿತದ ನಾಮಮಾತ್ರ ಮುಖ್ಯಸ್ಥರು. ಅಧ್ಯಕ್ಷರ ಹೆಸರಿನಲ್ಲೇ ಎಲ್ಲ ಆಡಳಿತವೂ ನಡೆಯುತ್ತದೆ. ಮಂತ್ರಿಮಂಡಲ ಇವರಿಗೆ ಸಲಹೆ ಮತ್ತು ಸಹಾಯ ನೀಡುತ್ತದೆ. ಆದರೆ ವಾಸ್ತವವಾಗಿ ಮಂತ್ರಿಮಂಡಲವೇ ನೈಜಕಾರ್ಯಾಂಗ, ಮಂತ್ರಿಮಂಡಲಕ್ಕೂ ಸಚಿವಸಂಪುಟಕ್ಕೂ ಇರುವ ವ್ಯತ್ಯಾಸವನ್ನು ಇಲ್ಲಿ ಗಮನಿಸುವುದು ಅವಶ್ಯಕ. ಮಂತ್ರಿಮಂಡಲ ಸಂಪುಟಕ್ಕಿಂತ ದೊಡ್ಡದು. ಆದರೆ ಅದರ ದೊಡ್ಡತನ ಸಂಖ್ಯೆಯಲ್ಲಿ ಮಾತ್ರ, ಅಧಿಕಾರದಲ್ಲಿಲ್ಲ. ಪ್ರಧಾನ ಮಂತ್ರಿಯ ಸಲಹೆಯ ಮೇರೆಗೆ ರಾಷ್ಟ್ರಾಧ್ಯಕ್ಷರು ನೇಮಿಸುವ ಮಂತ್ರಿಮಂಡಲದಲ್ಲಿ ನಾಲ್ಕು ದರ್ಜೆಯ ಮಂತ್ರಿಗಳಿರುತ್ತಾರೆ. ಮೊದಲನೆಯದಾಗಿ ಸಂಪುಟ ಸಚಿವರು, ಎರಡನೆಯದಾಗಿ ರಾಜ್ಯಸಚಿವರು, ಮೂರನೆಯದಾಗಿ ಉಪಸಚಿವರು ಮತ್ತು ನಾಲ್ಕನೆಯದಾಗಿ ಸಂಸದೀಯ ಕಾರ್ಯದರ್ಶಿಗಳು. ನೀತಿ ನಿರೂಪಣೆಯಲ್ಲಿ ಸಚಿವ ಸಂಪುಟದ್ದೇ ಮೇಲಗೈ. ಸಾಮಾನ್ಯವಾಗಿ ದೇಶದ ಆಡಳಿತವನ್ನು ನಿರ್ದೇಶಿಸುವ ಹೊಣೆ ಈ ಸಚಿವ ಸಂಪುಟದ್ದು. ಪ್ರಧಾನ ಮಂತ್ರಿಯನ್ನೊಳಗೊಂಡು ಮಂತ್ರಿಮಂಡಲದ ಹಿರಿಯ ಮತ್ತು ಪ್ರಭಾವಯುತ ಸಚಿವರಿರುವ ಈ ಸಂಪುಟವೇ ಆಡಳಿತದ ಕೇಂದ್ರ ಬಿಂದು.

ಸಚಿವರ ಸ್ಥಾನಮಾನಗಳು : ಮಂತ್ರಿಮಂಡಲ ಮತ್ತು ಸಚಿವಸಂಪುಟಗಳ ಕಾರ್ಯವನ್ನು ಸುಲಭಗೊಳಿಸಲು ಆಡಳಿತದ ಕಾರ್ಯಭಾರಗಳನ್ನು ವಿವಿಧ ಖಾತೆಗಳಾಗಿ ವಿಂಗಡಿಸಿ ಬೇರೆ ಬೇರೆ ಸಚಿವರುಗಳ ನಡುವೆ ಹಂಚಲಾಗುತ್ತದೆ. ಉದಾಹರಣೆಗೆ ವಿದೇಶಾಂಗ ಖಾತೆ, ಗೃಹಖಾತೆ, ರಕ್ಷಣಾ ಖಾತೆ, ಮುಂತಾದವು. ಒಂದೊಂದು ಖಾತೆಯಲ್ಲೂ ಸಾಮಾನ್ಯವಾಗಿ ಅನೇಕ ಇಲಾಖೆಗಳೂ ಮತ್ತಿತರ ಸಂಸ್ಥೆಗಳ ವ್ಯವಹಾರಗಳೂ ಅಡಕವಾಗಿರುತ್ತವೆ. ಅಪರೂಪಕ್ಕೆ ರಾಜ್ಯ ಸಚಿವರುಗಳನ್ನು ಖಾತೆಯ ಮುಖ್ಯಸ್ಥರಾಗಿರುತ್ತಾರೆ. ಅಪರೂಪಕ್ಕೆ ರಾಜ್ಯ ಸಚಿವರುಗಳನ್ನು ಖಾತೆಯ ಮುಖ್ಯಸ್ಥರಾಗಿ ನೇಮಿಸುವುದೂ ಉಂಟು. ಅಂಥ ಸಂದರ್ಭದಲ್ಲಿ ತಮ್ಮ ಖಾತೆಯ ವ್ಯವಹಾರಗಳು ಸಂಪುಟದ ಸಭೆಗಳಲ್ಲಿ ಭಾಗವಹಿಸುತ್ತಾರೆ. ಸಂಪುಟ ಸಚಿವರು ಖಾತೆಯ ಮುಖ್ಯಸ್ಥರಾಗಿದ್ದರೆ. ಆಗ ರಾಜ್ಯ ಸಚಿವರು ಆ ಖಾತೆಯ ಒಂದು ಇಲಾಖೆಯ ಮುಖ್ಯಸ್ಥರಾಗಿ ಅಥವಾ ಸಹಾಯಕರಾಗಿ ಸೇವೆ ಸಲ್ಲಿಸುತ್ತಾರೆ. ಉಪ ಸಚಿವರುಗಳು ಮಾತ್ರ ಯಾವಾಗಲೂ ಸಹಾಯಕ ಸಚಿವರಾಗಿ ಸಂಪುಟ ಅಥವಾ ರಾಜ್ಯ ಸಚಿವರುಗಳ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಸಂಸದೀಯ ಕಾರ್ಯದರ್ಶಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿಯೂ ಸಂಸದೀಯ ಕಾರ್ಯಕಲಾಪಗಳಲ್ಲಿಯೂ ತಮ್ಮ ಇಲಾಖೆಯ ಸಚಿವರುಗಳಿಗೆ ಸಹಾಯ ನೀಡುತ್ತಾರೆ. ಇವರಿಗೆ ಯಾವ ಆಡಳಿತದ ಜವಾಬ್ದಾರಿಯೂ ಇರುವುದಿಲ್ಲ. ಸಾಮಾನ್ಯವಾಗಿ ಸಂಸತ್ತಿನ ಯುವಸದಸ್ಯರನ್ನು ಸರ್ಕಾರದ ಸಂಸದೀಯ ವ್ಯವಹಾರದಲ್ಲಿ ತರಬೇತಿ ಪಡೆಯಲು ಈ ಸಂಸದೀಯ ಕಾರ್ಯದರ್ಶಿಗಳಾಗಿ ನೇಮಿಸಲಾಗುತ್ತದೆ.

ಸಂಪುಟದ ಸಹಾಯಕ ಅಂಗಗಳು : ಸಚಿವ ಸಂಪುಟ ರಾಷ್ಟ್ರದ ಮಹೋನ್ನತ ವ್ಯವಹಾರಗಳ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಈ ಗಹನವಾದ ಕಾರ್ಯದಲ್ಲಿ ಸಹಾಯಮಾಡಲು ಸಂಪುಟ ಸಮಿತಿಗಳಿವೆ. ಸಂಪುಟವೇ ನೇಮಿಸುವ ಸಂಪುಟ ಸಚಿವರುಗಳಿರುವ ಈ ಸಮಿತಿಗಳು ವಿವಿಧ ವಿಚಾರಗಳ ಬಗ್ಗೆ ದೀರ್ಘಾಲೋಚನೆಮಾಡಿ ಸಂಪುಟದ ಕೆಲಸವನ್ನು ತಮ್ಮ ವಿಚಾರಪೂರಿತ ಸಲಹೆಗಳ ಮೂಲಕ ಸುಲಭಗೊಳಿಸುತ್ತವೆ. ಸಚಿವ ಸಂಪುಟ ತನ್ನ ಆವಶ್ಯಕತೆಗೆ ತಕ್ಕಂತೆ ಈ ಸಮಿತಿಗಳನ್ನು ನೇಮಿಸುತ್ತದೆ. ಆದರೂ ರಾಜಕೀಯ, ಆರ್ಥಿಕ, ಸಂಸದೀಯ ಮತ್ತು ನೇಮಕಾತಿ ಇವುಗಳ ಸಂಪುಟಸಮಿತಿಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಇವುಗಳೆಲ್ಲೆಲ್ಲ ಅತ್ಯಂತ ಪ್ರಭಾವಶಾಲೀ ಸಚಿವರುಗಳಿರುವ ರಾಜಕೀಯ ವ್ಯವಹಾರ ಸಮಿತಿ ಮುಖ್ಯ.
ಸಂಪುಟ ಕಾರ್ಯಾಲಯ ಉನ್ನತಾಧಿಕಾರದ ಕಚೇರಿ. ಸಚಿವ ಸಂಪುಟದ ವ್ಯವಹಾರಗಳಲ್ಲಿ ಇದು ಸಹಾಯ ನೀಡುತ್ತದೆ. ರಾಷ್ಟ್ರದ ಅತ್ಯುನ್ನತ ಆಡಳಿತಾಧಿಕಾರಿಯಾದ ಸಂಪುಟ ಕಾರ್ಯದರ್ಶಿಯನ್ನು ಮುಖ್ಯಸ್ಥನಾಗಿ ಹೊಂದಿರುವ ಈ ಕಾರ್ಯಾಲಯ ಸಂಪುಟ ಸಭೆಗಳ ಮತ್ತು ಸಂಪುಟ ಸಮಿತಿಗಳ ಕಾರ್ಯಕಲಾಪಗಳ ದಾಖಲೆಗಳನ್ನಿಡುವುದರಲ್ಲಿ, ಪತ್ರ ವ್ಯವಹಾರಗಳಲ್ಲಿ ಅವುಗಳಿಗೆ ಯುಕ್ತ ಸಲಹೆ ನೀಡುವುದು. ಸಂಪುಟ ಕಾರ್ಯದರ್ಶಿ ಹಿರಿಯ ಐ.ಸಿ.ಎಸ್. ಅಥವಾ ಐ.ಎ.ಎಸ್ ಅಧಿಕಾರಿಯಾಗಿದ್ದು ಆಡಳಿತ ಸೇವೆಗಳ ನೇತಾರನಾಗಿ, ಸಂಪುಟದ ಮುಖ್ಯ ಸಲಹೆ ಗಾರನಾಗಿ ಕಾರ್ಯನಿರ್ವಹಿಸುತ್ತಾನೆ.

ಸಂಪುಟದ ನಿರ್ಧಾರಾನುಸಾರ ನೇಮಕಗೊಂಡಿರುವ ರಾಷ್ಟ್ರೀಯಯೋಜನಾ ಮಂಡಳಿಯನ್ನೂ ಸಂಪುಟದ ಸಲಹಾ ಸಮಿತಿಯೆಂದೇ ಪರಿಗಣಿಸಬಹುದು. ಪ್ರಧಾನಮಂತ್ರಿ ಅಧ್ಯಕ್ಷರಾಗಿಯೂ ಯೋಜನಾ ಮಂತ್ರಿ ಉಪಾಧ್ಯಕ್ಷರಾಗಿಯೂ ಉಳ್ಳ ಈ ಮಂಡಳಿಯಲ್ಲಿ ಕೆಲವು ಪ್ರಮುಖ ಸಚಿವರುಗಳೂ ಆಡಳಿತ, ಆರ್ಥಿಕ, ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ನುರಿತ ಒಟ್ಟು 7-8 ಸದಸ್ಯರೂ ಇದ್ದು ಈ ಮಂಡಳಿ ರಾಷ್ಟ್ರದ ಚಿಂತನಾಗಣಿಯಾಗಿ ಕೇಂದ್ರ ಸರ್ಕಾರದ ಹಾಗೂ ರಾಜ್ಯಗಳ ಭವಿಷ್ಯದ ನೀತಿ ಮತ್ತು ಯೋಜನೆಗಳನ್ನು ತಯಾರಿಸುತ್ತದೆ.
ಪ್ರಧಾನಿ ಮತ್ತು ಪ್ರಧಾನಿಯ ಕಾರ್ಯಾಲಯ : ಸಂಸದೀಯ ಸರ್ಕಾರದಲ್ಲಿ ಪ್ರಧಾನಿಯ ಹೊಣೆ ಬರುಬರುತ್ತ ಹೆಚ್ಚುತ್ತಿದೆ. ದೇಶದ, ಸಂಸತ್ತಿನ, ಸಚಿವ ಸಂಪುಟದ ಮತ್ತು ಆಡಳಿತದ ನೇತಾರರಾಗಿ ಪ್ರಧಾನಿಯ ಕಾರ್ಯಬಾಹುಳ್ಯ ವಿಸ್ತಾರವಾದದ್ದು. ಇವರ ಸಹಾಯಕ್ಕಾಗಿ ಪ್ರಬಲವಾದ ಕಾರ್ಯಲಯವಿದೆ. ಈಚಿನ ದಿನಗಳಲ್ಲಿ ಸಂಪುಟ ಕಾರ್ಯಾಲಯಕ್ಕಿಂತಲೂ ಹೆಚ್ಚಿನ ಅಧಿಕಾರ ಮತ್ತು ಪ್ರಭಾವ ಪ್ರಧಾನಿಯ ಕಾರ್ಯಾಲಯಕ್ಕಿರುವುದು ಕಂಡುಬಂದಿದೆ.
ಸಚಿವಾಲಯ : ಕೇಂದ್ರ ಸಚಿವರುಗಳ ಕಾರ್ಯನಿರ್ವಹಣೆಯಲ್ಲಿ ಕೇಂದ್ರ ಸಚಿವಾಲಯದ ಪಾತ್ರ ಮುಖ್ಯವಾದುದು. ಸಚಿವರ ಖಾತೆಗಳಿಗೆ ಹೊಂದಿದಂತೆ ಪ್ರತಿಯೊಂದು ಖಾತೆಗೂ ಒಂದೊಂದು ಕಾರ್ಯಾಲಯವಿದೆ. ಈ ಕಾರ್ಯಾಲಯಗಳನ್ನು ಸಚಿವಾಲಯಗಳೆಂದೂ ಕರೆಯಲಾಗುತ್ತದೆ. ಪ್ರತಿಯೊಂದು ಸಚಿವಾಲಯದ ಮುಖ್ಯಸ್ಥ ಕಾರ್ಯದರ್ಶಿ, ಅಲ್ಲದೆ ಸಚಿವಾಲಯವನ್ನು ಅದರ ಕಾರ್ಯದ ಒತ್ತಡಕ್ಕೆ ಅನುಗುಣವಾಗಿ ಅನೇಕ ಅಂಗ, ವಿಭಾಗ, ಶಾಖೆ ಮತ್ತು ಕಛೇರಿಗಳಾಗಿ ವಿಂಗಡಿಸಲಾಗಿದೆ. ಇವುಗಳ ಮುಖ್ಯಸ್ಥರಾಗಿ ಅನುಕ್ರಮವಾಗಿ ವಿಶೇಷ ಕಾರ್ಯದರ್ಶಿ, ಸಹಕಾರ್ಯದರ್ಶಿ, ಜಂಟಿಕಾರ್ಯದರ್ಶಿ, ಉಪಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಮತ್ತು ವಿಭಾಗಾಧಿಕಾರಿಗಳು ಕೆಲಸ ಮಾಡುತ್ತಾರೆ. ಸಚಿವಾಲಯ ಪ್ರತಿಯೊಂದು ಖಾತೆಯ ಕಾರ್ಯನಿರ್ವಹಣೆಯಲ್ಲಿ ಸಚಿವರುಗಳಿಗೆ ದಾಖಲೆ ಇಡುವ, ಪತ್ರವ್ಯವಹರಿಸುವ ಮತ್ತು ಸಲಹೆ ನೀಡುವ ಕಾರ್ಯಗಳನ್ನು ಮಾಡುತ್ತವೆ. ಅಲ್ಲದೆ ಒಂದು ಖಾತೆಯ ವಿವಿಧ ಇಲಾಖೆ ಮತ್ತು ಸಂಸ್ಥೆಗಳ ವ್ಯವಹಾರಗಳ ಹೊಂದಾಣಿಕೆ, ನಿರ್ದೇಶನ ಮತ್ತು ನಿಯಂತ್ರಣದಲ್ಲೂ ಸಚಿವಾಲಯದ್ದೇ ಪ್ರಮುಖ ಪಾತ್ರ. ಹಿರಿಯ ಮತ್ತು ಅನುಭವಿ ಐ.ಸಿ.ಎಸ್ ಅಥವಾ ಐ.ಎ.ಎಸ್ ಅಧಿಕಾರಿಗಳನ್ನು ಅಥವಾ ಯುಕ್ತ ತಜ್ಞರುಗಳನ್ನು ಸಚಿವಾಲಯದ ಪ್ರಮುಖ ಕಾಯದರ್ಶಿಗಳಾಗಿ ನೇಮಿಸಲಾಗುತ್ತದೆ. ಸಚಿವಾಲಯದ ಹಿರಿಯ ಸ್ಥಾನಗಳಲ್ಲೆಲ್ಲ ಸಾಮಾನ್ಯವಾಗಿ ಐ.ಎ.ಎಸ್ ಅಧಿಕಾರಿಗಳೇ ಇರುತ್ತಾರೆ. ಆದರೆ ಅಧೀನ ಕಾರ್ಯದರ್ಶಿಯ ಮತ್ತು ಕೆಳಗಿನ ಸ್ಥಾನಗಳಲ್ಲಿ ಮಾತ್ರ ಸೇವೆ ಸಲ್ಲಿಸಲು ಕೇಂದ್ರ ಸಚಿವಾಲಯ ಸೇವೆ ಎಂಬ ವಿಶಿಷ್ಟ ಸೇವೆಯ ಅಧಿಕಾರಿಗಳೇ ಇರುವರು. ಏನೇ ಆದರೂ ಈ ಸಚಿವಾಲಯಗಳೆಲ್ಲವೂ ಐ.ಎ.ಎಸ್ ಆಡಳಿತ ಸೇವೆಯ ಮುಷ್ಟಿಯಲ್ಲಿ ಸಿಕ್ಕಿವೆ. ಇದರಿಂದಾಗಿ ಭಾರತದ ಆಡಳಿತ ನೌಕರಶಾಹಿಯಾಗಿದೆ ಎಂಬ ಆಪಾದನೆಯುಂಟು. ಸಚಿವಾಲಯವೇ ಪ್ರತಿಯೊಂದು ಖಾತೆಯ ಆಡಳಿತದ ಕೇಂದ್ರ. ತನ್ನ ನಿರಂತರತೆ, ನಿಪುಣತೆ, ಮತ್ತು ಅನುಭವದಿಂದಾಗಿ ಸರ್ಕಾರದ ನೀತಿ ನಿರ್ದೇಶನಗಳ ಉಗಮಕ್ಕೆ ಕೇಂದ್ರ ಸ್ಥಾನ. ಈ ಸಚಿವಾಲಯಗಳ ಸಂಖ್ಯೆ ಮತ್ತು ಗಾತ್ರ ದಿನೇ ದಿನೇ ಹೆಚ್ಚುತ್ತಿವೆ, 1939ರಲ್ಲಿ ಕೇವಲ 9 ಸಚಿವಾಲಯಗಳು ಇದ್ದುವು. 1970ರ ಹೊತ್ತಿಗೆ ಸಚಿವಾಲಯಗಳ ಸಂಖ್ಯೆ 40ಕ್ಕೇರಿತ್ತು. 1948ರಲ್ಲಿ 836 ಅಧಿಕಾರಿಗಳಿದ್ದ ಕೇಂದ್ರ ಸಚಿವಾಲಯದಲ್ಲಿ 1967ರ ಹೊತ್ತಿಗೆ 3,462 ಅಧಿಕಾರಿಗಳಿದ್ದರು. ಹೆಚ್ಚುವ ಕರ್ತವ್ಯ ಮತ್ತು ಹೊಣೆಗನುಸಾರ ಇವುಗಳೂ ವಿಸ್ತಾರವಾಗುತ್ತಲೇ ಇರುತ್ತವೆ. 
ಕಾರ್ಯನಿರ್ವಾಹಕ ವ್ಯವಸ್ಥೆ: ಸರ್ಕಾರದ ನಿರ್ಧಾರಗಳನ್ನೂ ನೀತಿ ನಿಯಮಗಳನ್ನು ಕಾರ್ಯಗತಗೊಳಿಸುವುದಕ್ಕೆ ಕೇಂದ್ರಾಡಳಿತದಲ್ಲಿ ಅನೇಕ ಇಲಾಖೆಗಳೂ ಅಂಗಸಂಸ್ಥೆಗಳೂ ಲಕ್ಷಾಂತರ ಮಂದಿ ಅಧಿಕಾರಿಗಳೂ ನೌಕರರೂ ಇದ್ದಾರೆ. ಕೇಂದ್ರ ಸರ್ಕಾರದ ಕಾರ್ಯನಿರ್ವಾಹಕ ಘಟಕಗಳನ್ನು ವಿವಿಧ ಇಲಾಖೆಗಳಾಗಿ ಅವುಗಳಿಗೆ ಲಗತ್ತಿಸಿದ ಕಛೇರಿ ಮತ್ತು ಅಧೀನ ಕಛೇರಿಗಳಾಗಿ ವಿಂಗಡಿಸಬಹುದು. ಹೀಗೆ ಲಗತ್ತಿಸಿದ ಮತ್ತು ಅಧೀನವಾದ ಕಛೇರಿಗಳು ನಿರ್ದೇಶನಾಲಯಗಳಾಗಿ ಮಂಡಲಿಗಳಾಗಿ, ಆಯೋಗಗಳಾಗಿ ಸ್ವಾಯಸತ್ತ ಸಂಸ್ಥೆಗಳಾಗಿ ವಿವಿಧ ಅಂಗಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತವೆ. 1969ರಲ್ಲಿ ಸುಮಾರು 596 ಕಾರ್ಯ ನಿರ್ವಾಹಕ ಘಟಕಗಳು ಕೇಂದ್ರಾಡಳಿತದಲ್ಲಿದ್ದುವು. ಸಂವಿಧಾನಬದ್ಧವಾಗಿ ರಚಿತವಾದ ಯೂನಿಯನ್ ಲೋಕಸಭಾ ಆಯೋಗವಾಗಲಿ ಶಾಸನಬದ್ಧವಾಗಿ ರಚಿತವಾದ ರೈಲ್ವೆಮಂಡಳಿಯಾಗಲಿ ಕೇಂದ್ರ ಗೂಢಚಾರ ವಿಭಾಗವಾಗಲಿ ಜೀವವಿಮಾ ಸಂಸ್ಥೆಯಾಗಲಿ ಕಂಪನಿ ಕಾನೂನಿನ ನಿರ್ದೇಶನಾಲಯಗಳಾಗಲಿ ಎಲ್ಲವೂ ಒಂದಲ್ಲ ಒಂದು ಕೇಂದ್ರ ಇಲಾಖೆಗಳಿಗೆ ಅಥವಾ ಸಚಿವಾಲಯಕ್ಕೆ ಲಗತ್ತಾಗಿರುತ್ತವೆ. ಇಂಥ ನೂರಾರು ವಿವಿಧ ಅಂಗ ಸಂಸ್ಥೆಗಳ ಸಹಾಯದಿಂದ ಕೇಂದ್ರದ ಕಾರ್ಯನಿರ್ವಹಣೆ ಆಗುತ್ತದೆ. ಈ ಸಂಸ್ಥೆಗಳ ಆವಶ್ಯಕತೆಗೆ ಅನುಗುಣವಾಗಿ ಕ್ಷೇತ್ರ ಕಛೇರಿಗಳನ್ನು ದೇಶಾದ್ಯಂತ ಹೊಂದಿವೆ.

ಸಿಬ್ಬಂದಿ ವ್ಯವಸ್ಥೆ : ಕೇಂದ್ರದ ಬೃಹತ್ ಆಡಳಿತವನ್ನು ನಡೆಸಲು ಈಗ ಸುಮಾರು 30 ಲಕ್ಷಕ್ಕಿಂತಲೂ ಹೆಚ್ಚಾದ ಸಿಬ್ಬಂದಿ ವರ್ಗವಿದೆ. 1948ರಲ್ಲಿ ಸುಮಾರು 14,45,050 ಇದ್ದ ಈ ವರ್ಗ 1971-72ರ ಹೊತ್ತಿಗೆ 29.82 ಲಕ್ಷವಾಗಿತ್ತು. ಈ ವರ್ಗವನ್ನು ನಿರ್ವಹಿಸಲು ಸಾಕಷ್ಟು ವಿಭಾಗಗಳೂ ಇಲಾಖೆಗಳೂ ಇವೆ. ಪ್ರಥಮವಾಗಿ ಇದನ್ನು ಅಖಿಲಭಾರತ ಮತ್ತು ಕೇಂದ್ರ ಸೇವೆಗಳೆಂದು ವರ್ಗೀಕರಿಸಲಾಗಿದೆ. ಅಖಿಲ ಭಾರತ ಸೇವೆಗಳಲ್ಲಿ ಮುಖ್ಯವಾಗಿ ಭಾರತ ಆಡಳಿತ ಸೇವೆ (ಐ.ಎ.ಎಸ್.) ಮತ್ತು ಭಾರತ ಸೇವೆಗಳಲ್ಲಿ (ಐ.ಪಿ.ಎಸ್.) ಮುಖ್ಯವಾದವು. ಕೇಂದ್ರ ಸೇವೆಗಳಲ್ಲಿ ಭಾರತ ರೈಲ್ವೆ ಸೇವೆ, ಕೇಂದ್ರ ಕಾರ್ಯಾಲಯ ಸೇವೆಗಳೂ, ಆದಾಯ ತೆರಿಗೆಯ ಸೇವೆ ಮುಂತಾದವುಗಳಿವೆ. ಈ ಸೇವೆಗಳಲ್ಲದೆ ಗೆಜೆಟೆಡ್ ಮತ್ತು ನಾನ್‍ಗೆಜೆಟೆಡ್ ಸೇವೆಗಳಾಗಿಯೂ ಸಿಬ್ಬಂದಿವರ್ಗವನ್ನು ವರ್ಗೀಕರಿಸಲಾಗಿದೆ. ಅಲ್ಲದೆ ಈ ಸೇವೆಗಳನ್ನು ಒಂದು, ಎರಡು, ಮೂರು ಮತ್ತು ನಾಲ್ಕನೆಯ ವರ್ಗಗಳಾಗಿ ವಿಂಗಡಿಸಲಾಗಿದೆ, ಇವುಗಳಲ್ಲಿ ಮೊದಲೆರಡು ವರ್ಗಗಳನ್ನು ಗೆಜೆಟೆಡ್ ಎಂದೂ ಮೂರು ಮತ್ತು ನಾಲ್ಕನೆಯ ವರ್ಗಗಳನ್ನು ನಾನ್ ಗೆಜೆಟೆಡ್ ಎಂದೂ ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಮೊದಲೆರಡು ವರ್ಗಗಳು ಆಡಳಿತ ನಿರ್ವಹಣೆಯನ್ನೂ ಮೂರನೆಯ ವರ್ಗ ಕಾರಕೂನ ಮತ್ತು ಉಸ್ತುವಾರಿ ಸೇವೆಗಳನ್ನೂ ನಾಲ್ಕನೆಯ ವರ್ಗ ದೈಹಿಕ ಹಾಗೂ ಕೆಳಮಟ್ಟದ ತಾಂತ್ರಿಕ ಸೇವೆಗಳನ್ನೂ ಸಲ್ಲಿಸುತ್ತವೆ. ಅಖಿಲ ಭಾರತ ಸೇವಾವರ್ಗ ಕೇಂದ್ರ ಮತ್ತು ರಾಜ್ಯಗಳೆರಡರಲ್ಲೂ ಸೇವೆ ಸಲ್ಲಿಸುತ್ತವೆ. ಕೇಂದ್ರ ಸರ್ಕಾರಿ ಸೇವೆಗಳು ಮಾತ್ರ ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸಬೇಕಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಬರುವಂತೆ ಈ ಉನ್ನತ ಸೇವೆಗಳ ಪದವೀಧರ ಅಭ್ಯರ್ಥಿಗಳನ್ನು ಆಯುವಲ್ಲಿ ಭಾರತೀಯ ಲೋಕಸಭಾ ಆಯೋಗದ ಪಾತ್ರ ಬಲು ಮುಖ್ಯ ಸಂವಿಧಾನಬದ್ಧವಾಗಿ ರಚಿಸಲ್ಪಟ್ಟಿರುವ ಈ ಆಯೋಗಕ್ಕೆ ತನ್ನ ಕೆಲಸದಲ್ಲಿ ಸ್ವಾಯತ್ತತೆ ಇದೆ. ಹೀಗೆ ಆಯ್ದ ಯುವ ಅಭ್ಯರ್ಥಿಗಳಿಗೆ ಯುಕ್ತ ತರಪೇತಿ ನೀಡುವ ಒಂದು ವಿಶಿಷ್ಟ ವ್ಯವಸ್ಥೆ ಇದೆ. ಪ್ರಾರಂಭದಲ್ಲಿ ಅಖಿಲ ಭಾರತ ಸೇವೆಗಳ ಮತ್ತು ಕೇಂದ್ರ ಸೇವೆಗಳ ಸದಸ್ಯರಿಗೆ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿ ಆಫ್ ಅಡ್ಮಿನಿಷ್ಟ್ರೇಷನ್ ಶಾಲೆಯಲ್ಲಿ ತರಬೇತಿ ದೊರೆಯುತ್ತದೆ. ಅನಂತರ ಅವರನ್ನು ಕೆಲಸದ ಮೇಲೆ ಬಿಟ್ಟು ಕೆಲವು ಕಾಲ ವ್ಯಾವಹಾರಿಕ ತರಪೇತಿ ನೀಡಲಾಗುತ್ತದೆ. ಅಲ್ಲದೆ ವಿವಿಧ ಆಡಳಿತ ಸೇವೆಗಳ ಅಭ್ಯರ್ಥಿಗಳಿಗೆ ಬೇರೆ ಬೇರೆ ತರಪೇತಿ ಶಾಲೆಗಳೂ ಇವೆ. ಆಡಳಿತದಲ್ಲಿ ಹಲವು ವರ್ಷ ನುರಿತ ಅಧಿಕಾರಿಗಳಿಗೆ ಲಾಲ್‍ಬಹದ್ದೂರ್ ಅಕಾಡೆಮಿಯಲ್ಲೂ ಇನ್ನೂ ಮೇಲ್ಮಟ್ಟದ ಕೆಲವು ಅಧಿಕಾರಿಗಳಿಗೆ ಹೈದರಾಬಾದಿನಲ್ಲಿ ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜಿನಲ್ಲೂ ಹೆಚ್ಚಿನ ತರಪೇತಿ ನೀಡಲಾಗುತ್ತದೆ.
ನಿಯಂತ್ರಣ ವ್ಯವಸ್ಥೆ: ಭಾರತದ ಆಡಳಿತ ಯಂತ್ರ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮತ್ತು ಪ್ರಜಾನಿಯಂತ್ರಣಕ್ಕೆ ಒಳಪಟ್ಟಿದೆ. ನೈಜ ಕಾರ್ಯಾಂಗವೆಂದು ಪರಿಗಣಿಸಲ್ಪಟ್ಟಿರುವ ಕೇಂದ್ರ ಮಂತ್ರಿಮಂಡಲ ಆಡಳಿತವನ್ನು ನಿಯಂತ್ರಿಸುತ್ತದೆ. ಇದಕ್ಕೆ ಆಡಳಿತದ ಮೇಳೆ ನಿರಂತರವಾಗಿ ಅತ್ಯಂತ ನಿಕಟ ಹತೋಟಿ ಇದೆ. ಆಡಳಿತದ ಗುರಿಗಳನ್ನು ತೀರ್ಮಾನಿಸಿ, ಯೋಜನೆಗಳನ್ನು ರೂಪಿಸಿ ವ್ಯವಸ್ಥೆಯನ್ನು ಸಿದ್ಧಪಡಿಸಿ, ಅಧಿಕಾರ, ಸಿಬ್ಬಂದಿ, ಹಣಕಾಸು ಮುಂತಾದ ಸಂಪನ್ಮೂಲ ಮತ್ತು ಸವಲತ್ತುಗಳನ್ನು ಒದಗಿಸಿ, ಯುಕ್ತ ನಿರ್ದೇಶನ ನೀಡುವ ಕಾರ್ಯಾಂಗಕ್ಕೆ ಆಡಳಿತವನ್ನು ನಿಯಂತ್ರಿಸುವ ಪ್ರಥಮ ಹೊಣೆ ಮತ್ತು ಅಧಿಕಾರ ಇದೆ. ನಿರಂತರ ಉಸ್ತುವಾರಿ ವ್ಯವಸ್ಥೆ, ಆಯವ್ಯಯದ ಮೇಲೆ ಹತೋಟಿ, ವರದಿಗಳೂ ಮುಂತಾದವುಗಳ ಮೂಲಕ ಕಾರ್ಯಾಂಗ ಆಡಳಿತವನ್ನು ನಿಯಂತ್ರಿಸುತ್ತದೆ.
ಕಾರ್ಯಾಂಗವನ್ನೇ ನಿಯಂತ್ರಿಸುವ ಅಧಿಕಾರವುಳ್ಳ ಶಾಸಕಾಂಗವೂ ಆಡಳಿತವನ್ನು ಅನೇಕ ವಿಧದಲ್ಲಿ ನಿಯಂತ್ರಿಸುತ್ತದೆ. ಮೊಲನೆಯದಾಗಿ ಆಡಳಿತದ ಆಗುಹೋಗುಗಳಿಗೆ ಶಾಸಕಾಂಗಕ್ಕೆ ಮಂತ್ರಿಮಂಡಲದ ಜಂಟಿ ಮತ್ತು ವೈಯಕ್ತಿಕ ಜವಾಬ್ದಾರಿ ಇರುತ್ತದೆ. ಇದರ ಪ್ರಕಾರ ಮಂತ್ರಿಗಳನ್ನು ವೈಯಕ್ತಿಕವಾಗಿಯೂ ಸರ್ಕಾರವನ್ನು ಒಟ್ಟಾರೆಯಾಗಿಯೂ ಪ್ರಶ್ನಿಸಿ, ಟೀಕಿಸಿ, ಅಧಿಕಾರದಿಂದಿಳಿಸುವ ಅಧಿಕಾರ ಕೇಂದ್ರದ ಸಂಸತ್ತಿಗೆ ಇದೆ. ಆಡಳಿತದ ಆಗುಹೋಗುಗಳನ್ನು ಚರ್ಚಿಸುವ ಮೂಲಕ, ಆಡಳಿತ ಬೇಡುವ ಅಧಿಕಾರ ಮತ್ತು ಸಂಪನ್ಮೂಲಗಳನ್ನು ನಿಯಂತ್ರಿಸುವ ಮೂಲಕ ಮತ್ತು ತನ್ನ ವಿವಿಧ ಸಮಿತಿಗಳ ವರದಿಗಳ ಮೂಲಕ ಆಡಳಿತದ ಮೇಲೆ ಉಸ್ತುವಾರಿ ನಡೆಸಿ ಸಂಸತ್ತು ಆಡಳಿತವನ್ನು ನಿಯಂತ್ರಿಸುತ್ತದೆ.

ಆಡಳಿತ ನಿಯಂತ್ರಣ ವ್ಯವಸ್ಥೆಯಲ್ಲಿ ಸಂಸತ್ತನ್ನೂ ಭಾಗಿಯಾಗಿ ಉಳ್ಳ ಲೆಕ್ಕ ಪರಿಶೀಲನಾ ವ್ಯವಸ್ಥೆಯ (ಆಡಿಟ್) ಪಾತ್ರ ಗಹನವಾದ್ದು. ಭಾರತದಲ್ಲಿ ನಿಯಂತ್ರಣ ಮಹಾಲೆಕ್ಕಪರಿಶೋಧಕರ ಇಲಾಖೆ ಇದೆ. ನಿಷ್ಪಕ್ಷಪಾತವಾಗಿ ಕಾರ್ಯ ಮಾಡಲು ಕಾರ್ಯಾಂಗದ ಹತೋಟಿಯಿಂದ ಮುಕ್ತವಾದ ಸ್ವಾಯತ್ತತೆ ಉಳ್ಳ ಈ ಇಲಾಖೆ ಕೇಂದ್ರ ಸರ್ಕಾರದ ಆಯವ್ಯಯ, ಲೆಕ್ಕ ವ್ಯವಹಾರ ಮತ್ತು ದಾಖಲೆಗಳನ್ನೆಲ್ಲ ವಾರ್ಷಿಕವಾಗಿ ಅಮೂಲಾಗ್ರ ಪರಿಶೋಧಿಸಿ ಒಂದು ಸಮಗ್ರ ವರದಿಯನ್ನು ರಾಷ್ಟ್ರಾಧ್ಯಕ್ಷರ ಮೂಲಕ ಸಂಸತ್ತಿಗೆ ಸಲ್ಲಿಸುತ್ತದೆ. ಇದರಿಂದಾಗಿ ಆಡಳಿತ ವ್ಯವಹಾರಗಳ ನ್ಯೂನತೆಗಳೂ ಅವ್ಯವಹಾರ ಮತ್ತು ದುರುಪಯೋಗಗಳೂ ತಿಳಿದು ಬರುತ್ತವೆ. ಈ ಕಾರ್ಯದಲ್ಲಿ ಇವರಿಗೆ ಸಹಾಯಮಾಡಲು ಕೇಂದ್ರ ಸರ್ಕಾರ ಮಟ್ಟದಲ್ಲಿ ಮೂರು ಮಂದಿ ಅಧಿಕಾರಿಗಳೂ ಪ್ರತ್ಯೇಕವಾಗಿ ರೈಲುರಕ್ಷಣಾ ಮತ್ತು ಇತರ ವ್ಯವಹಾರಗಳಿಗೆ ಒಬ್ಬೊಬ್ಬರು ಪ್ರಧಾನ ಲೆಕ್ಕಾಧಿಕಾರಿಗಳೂ ಅವರ ವಿಸ್ತಾರವಾದ ಕಛೇರಿ ಮತ್ತು ಸಿಬ್ಬಂದಿ ವರ್ಗವೂ ಇವೆ. ಸಂಸತ್ತಿಗೆ ಬಂದ ಈ ವಾರ್ಷಿಕ ಲೆಕ್ಕಪರಿಶೀಲನಾ ವರದಿಯನ್ನು ಸುದೀರ್ಘವಾಗಿ ಚರ್ಚಿಸಿ ಸಂಸತ್ತಿಗೆ ಸಲಹೆ ನೀಡಲು ಸಂಸತ್ತಿನ ಸಾರ್ವಜನಿಕ ಲೆಕ್ಕಸಮಿತಿ ಇದೆ. ಈ ಸಮಿತಿಯ ಸಲಹೆ ಮೇರೆ ಸಂಸತ್ತು ಆಡಳಿತದ ಅವ್ಯವಹಾರಗಳನ್ನು ಗಮನಿಸಿ ಸರಿಪಡಿಸುವ ಪ್ರಯತ್ನ ಮಾಡುತ್ತದೆ.

ನ್ಯಾಯಾಂಗ ನಿಯಂತ್ರಣ ಮತ್ತು ಪ್ರಜಾನಿಯಂತ್ರಣ ಈ ಮೇಲಿನ ನಿಯಂತ್ರಣಗಳಿಗಿಂತ ಭಿನ್ನವಾದವು. ಆಡಳಿತದಿಂದ ದೂರವಾದ ಮತ್ತು ಅಪರೂಪವಾದ ನ್ಯಾಯಾಂಗ ಮತ್ತು ಪ್ರಜಾನಿಯಂತ್ರಣ ಭಾರತದಲ್ಲಿ ಪಾಶ್ಚಾತ್ಯ ದೇಶಗಳಲ್ಲಿರುವಷ್ಟು ಸಕ್ರಿಯವಾಗಿಲ್ಲ. ಆಡಳಿತಕ್ಕೆ ಸಂಬಂಧಪಟ್ಟ ದೂರುಗಳೂ ತಮ್ಮ ಮುಂದೆ ಬಂದಾಗ ಸುಗ್ರೀವಾಜ್ಞೆಗಳ, ತಡೆಗಳ, ನಿರ್ದೇಶನಗಳ, ಮುಕ್ತ ವಿಚಾರಗಳ ಮತ್ತು ತೀರ್ಪುಗಳ ಮೂಲಕ ನ್ಯಾಯಾಂಗ ಆಡಳಿತವನ್ನು ನಿಯಂತ್ರಿಸುತ್ತದೆ. ಪ್ರಜಾನಿಯಂತ್ರಣ ಚುನಾಣೆಗಳ ಮೂಲಕ, ವೃತ್ತಪತ್ರಿಕೆಗಳು ಮತ್ತು ಸಾರ್ವಜನಿಕ ಸಭೆಗಳೇ ಮುಂತಾದವುಗಳ ಮೂಲಕ ಸರ್ಕಾರದ ಆಡಳಿತದ ಬಗ್ಗೆ ಮುಕ್ತ ಪ್ರಜಾಭಿಪ್ರಾಯ ವ್ಯಕ್ತ ಮಾಡುವ ಮತ್ತು ಸಾರ್ವಜನಿಕ ಸಂಘ, ಸಂಸ್ಥೆಗಳ ಮತ್ತು ಚಳವಳಿಗಳ ಒತ್ತಡಗಳನ್ನು ಆಡಳಿತದ ಮೇಲೆ ಹೇರುವ ಮೂಲಕ ಆಡಳಿತವನ್ನು ನಿಯಂತ್ರಿಸುತ್ತದೆ.
ಒಕ್ಕೂಟ ಆಡಳಿತ ವ್ಯವಸ್ಥೆ : ಭಾರತ ಒಂದು ಒಕ್ಕೂಟ. ಇದರಲ್ಲಿ ರಾಜ್ಯಗಳೂ ಕೇಂದ್ರಾಡಳಿತ ಪ್ರದೇಶಗಳೂ ಇವೆ. ಇವುಗಳ ನಡುವಿನ ಆಡಳಿತ ಸಂಬಂಧ ಸಂವಿಧಾನಬದ್ಧವಾದದ್ದು. ಜೊತೆಗೆ ವ್ಯಾವಹಾರಿಕವಾಗಿ ಬೆಳೆದು ಬಂದ ಅನೇಕ ಆಡಳಿತ ವ್ಯವಸ್ಥೆಗಳೂ ಪದ್ಧತಿಗಳೂ ಇವೆ. ಸಂವಿಧಾನದಲ್ಲೇ ಇವುಗಳ ನಡುವಿನ ಅಧಿಕಾರ, ಹಣಕಾಸು ಮತ್ತು ಕಾರ್ಯಕ್ಷೇತ್ರಗಳ ಹಂಚಿಕೆಯನ್ನು ವಿವರಿಸಿದೆ. ಕೇಂದ್ರದ ಕಡೆಗೇ ವಾಲುವ ಈ ಅಧಿಕಾರ ಮತ್ತು ಹಣಕಾಸು ಹಂಚಿಕೆ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೀಮಿತ ಸ್ವಾಯತ್ತತೆ ಇದೆ ಈ ಒಕ್ಕೂಟದ ರಾಜ್ಯ ಕೇಂದ್ರಗಳ ನಡುವೆ ಆಡಳಿತ ಸಮನ್ವಯ ತರಲು ರಾಷ್ಟ್ರೀಯ ಅಭಿವೃದ್ಧಿ ಮಂಡಳಿ, ರಾಷ್ಟ್ರೀಯ ಯೋಜನಾಮಂಡಳಿ, ಅನೇಕ ನಿರ್ದಿಷ್ಟ ವಿಷಯಗಳಿಗೆ ಸಂಬಂಧಪಟ್ಟ ಸಮಿತಿ ಅಥವಾ ಮಂಡಳಿಗಳು ರಾಜ್ಯಪಾಲರ, ಮುಖ್ಯಮಂತ್ರಿಗಳ, ಕೆಲವು ಖಾತೆಗೆ ಸಂಬಂಧಪಟ್ಟ ಅಖಿಲಭಾರತ ಮಂತ್ರಿಗಳ ಮತ್ತು ಕಾರ್ಯದರ್ಶಿಗಳ, ವಾರ್ಷಿಕ ಸಭೆ ಸಮ್ಮೇಳನಗಳು ಕೆಲಸ ಮಾಡುತ್ತವೆ.
ದೇಶದ ಅಭಿವೃದ್ಧಿಗೆ ರಾಜ್ಯಗಳ ನಡುವೆ ಉತ್ತಮ ಸಹಕಾರ ಸಂಬಂಧಗಳಿರಬೇಕು. ಅದಕ್ಕಾಗಿ ವಲಯ ಮಂಡಳಿಗಳನ್ನು ರಚಿಸಲಾಗಿದೆ. ಭಾರತವನ್ನು ಉತ್ತರವಲಯ, ದಕ್ಷಿಣವಲಯ, ಪೂರ್ವವಲಯ, ಪಶ್ಚಿಮವಲಯ ಮತ್ತು ಕೇಂದ್ರ ವಲಯಗಳಾಗಿ ವಿಭಾಗಿಸಿ ಆಯಾ ವಲಯಕ್ಕೆ ಅಲ್ಲಿಯ ಎಲ್ಲ ರಾಜ್ಯಗಳನ್ನೂ ಕೇಂದ್ರಾಡಳಿತ ಪ್ರದೇಶಗಳನ್ನೂ ಸೇರಿಸಲಾಗಿದೆ. ಪ್ರತಿಯೊಂದು ವಲಯಕ್ಕೂ ಒಂದು ವಲಯಮಂಡಳಿಗಳನ್ನು ರಚಿಸಲಾಗಿದೆ. ಈ ಎಲ್ಲ ವಲಯಮಂಡಳಗಳಿಗೂ ಕೇಂದ್ರದ ಗೃಹ ಸಚಿವರು ಅಧ್ಯಕ್ಷರಾಗಿರುತ್ತಾರೆ. ಆ ವಲಯದ ಮುಖ್ಯ ಮಂತ್ರಿಗಳು ಸದಸ್ಯರಾಗಿರುತ್ತಾರೆ. ವಾರ್ಷಿಕವಾಗಿ ಅಥವಾ ಅವಶ್ಯವಿದ್ದಂತೆ ಈ ಮಂಡಳಿಗಳ ಸಭೆ ನಡೆಯುತ್ತವೆ. ಈ ಮಂಡಳಿ ನಿರ್ದಿಷ್ಟ ವಿಷಯಗಳನ್ನು ಕೂಲಂಕಷವಾಗಿ ವಿಚಾರ ಮಾಡಿ ನಿರ್ಧಾರ ಮಾಡಲು ಗಮನ ಸೆಳೆದ ವಿಷಯಗಳಿಗೆ ಸಂಬಂಧಪಟ್ಟ ಸಚಿವರ ಅಥವಾ ಅಧಿಕಾರಿಗಳ ಸಮಿತಿಗಳನ್ನು ನೇಮಿಸುವುದೂ ಉಂಟು.

ಈ ಒಕ್ಕೂಟ ಸಂಬಂಧಗಲ್ಲಿ ಏನಾದರೂ ವಿವಾದವೆದ್ದರೆ ತೀರ್ಮಾನಿಸುವ ಅಧಿಕಾರವನ್ನು ರಾಷ್ಟ್ರದ ಉನ್ನತ ನ್ಯಾಯಾಲಯಗಳಿಗೆ ನೀಡಲಾಗಿದೆ. ಆದರೂ ಕೇಂದ್ರ ರಾಜ್ಯಗಳ ಸಂಬಂಧಗಳಲ್ಲಿ ಯಾವಾಗಲೂ ಕೇಂದ್ರದ್ದೇ ಮೇಲುಗೈ. ಕಾರಣ ಅದರ ಬಳಿ ಇರುವ ಹೆಚ್ಚಿನ ಅಧಿಕಾರ ಮತ್ತು ಹಣ. ತುರ್ತುಪರಿಸ್ಥಿತಿ ಹೇರುವ ಮೂಲಕ ರಾಜ್ಯಸರ್ಕಾರಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳನ್ನು ಮೂಲೆಗೊತ್ತರಿಸಿ ಅಥವಾ ನಿರ್ದೇಶನಗಳ ಮೂಲಕ ಹತೋಟಿ ತೆಗೆದುಕೊಂಡು ಅವುಗಳ ಆಡಳಿತಗಳನ್ನೆಲ್ಲ ಕೇಂದ್ರೀಕರಿಸುವ ಅಧಿಕಾರ ಕೇಂದ್ರಕ್ಕಿರುವುದು. ಅಲ್ಲದೆ ಯೋಜನಾ ವಿಧಾನದಲ್ಲೂ ಕೇಂದ್ರ ಮತ್ತು ರಾಜ್ಯಗಳೆರಡರಲ್ಲೂ ಸಾಮಾನ್ಯವಾಗಿ ಆಳುತ್ತಿರುವ ಒಂದೇ ಪಕ್ಷದ ಮೂಲಕ ಹಾಗೂ ಕೇಂದ್ರದ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶ ಆಡಳಿತದಲ್ಲಿ ಭಾಗವಹಿಸುವ ಕೇಂದ್ರದ ಹತೋಟಿಯಲ್ಲಿರುವ ಅಖಿಲಭಾರತ ಸೇವೆಗಳ ಮೂಲಕ ಮತ್ತು ಕೇಂದ್ರನೇಮಿತ ರಾಜ್ಯಪಾಲರ ಮೂಲಕ ಭಾರತದ ಒಕ್ಕೂಟದಲ್ಲಿ ಅಧಿಕಾರ ಕೇಂದ್ರೀಕೃತವಾಗಿದೆ ಎನ್ನಬಹುದು.

ರಾಜ್ಯಗಳ ಆಡಳಿತ ವ್ಯವಸ್ಥೆ : ಭಾರತ ಒಕ್ಕೂಟದಲ್ಲಿ 22 ರಾಜ್ಯಗಳೂ 9 ಕೇಂದ್ರಾಡಳಿತ ಪ್ರದೇಶಗಳೂ ಇದೆ (1985). ಭಾರತ ಒಕ್ಕೂಟದಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ಮತ್ತು ಸಿಕ್ಕಿಮ್ ರಾಜ್ಯಗಳಿಗೆ ಮಾತ್ರ ತಮ್ಮವೇ ಆದ ರಾಜ್ಯ ಸಂವಿಧಾನವಿದೆ. ಈ ಎರಡು ರಾಜ್ಯಗಳನ್ನು ಬಿಟ್ಟು ಮಿಕ್ಕೆಲ್ಲ ರಾಜ್ಯಗಳ ಒಳಾಡಳಿತ ವ್ಯವಸ್ಥೆ 1950ರ ಸಂವಿಧಾನದಲ್ಲಿ ಅಡಕವಾಗಿದೆ. ಈ ಎರಡು ರಾಜ್ಯಗಳಲ್ಲಿ ರಾಜ್ಯಮಟ್ಟದ ಸಂವಿಧಾನವಿದ್ದರೂ ಅವುಗಳ ಆಡಳಿತ ವ್ಯವಸ್ಥೆಯಲ್ಲಿ ಇತರ ರಾಜ್ಯಗಳಿಗಿಂತ ಬಲು ಭಿನ್ನವಾದ ಆಡಳಿತ ವ್ಯವಸ್ಥೆ ಏನೂ ಇಲ್ಲ. ಒಟ್ಟಾರೆ ಹೇಳುವುದಾದರೆ ಭಾರತದ ರಾಜ್ಯಗಳೆಲ್ಲೆಲ್ಲ ಒಂದೇ ಮಾದರಿಯ ಆಡಳಿತ ವ್ಯವಸ್ಥೆ ಇದೆ.

ನೀತಿ ನಿರೂಪಣಾ ವ್ಯವಸ್ಥೆ : ರಾಜ್ಯಗಳ ಮಟ್ಟದಲ್ಲೂ ಕೇಂದ್ರದಲ್ಲಿರುವ ಹಾಗೆ ಸಂಸದೀಯ ಪ್ರಜಾಸತ್ತಾತ್ಮಕ ಗಣರಾಜ್ಯ ತತ್ತ್ವ ಮತ್ತು ಪದ್ಧತಿಗಳ ಆಧಾರದ ಮೇಲೆ ಆಡಳಿತ ವ್ಯವಸ್ಥೆಯನ್ನು ರೂಪಿಸಲಾಗಿದೆ. ಕೇಂದ್ರದಲ್ಲಿ ಅಧ್ಯಕ್ಷರಿರುವ ಹಾಗೆ ರಾಜ್ಯದಲ್ಲಿ ರಾಜ್ಯಪಾಲ ಮತ್ತು ಕೇಂದ್ರದಲ್ಲಿ ಪ್ರಧಾನಮಂತ್ರಿ ಇರುವ ಹಾಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರೆ. ಕೇಂದ್ರದಲ್ಲಿ ಸಂಸತ್ತಿರುವ ಹಾಗೆ ರಾಜ್ಯಗಳಲ್ಲಿ ವಿಧಾನ ಮಂಡಲಗಳು ಇವೆ.

ಕೇಂದ್ರದಲ್ಲಿ ರಾಷ್ಟ್ರಾಧ್ಯಕ್ಷರು ಪರೋಕ್ಷವಾಗಿ ಚುನಾಯಿತರಾಗಿದ್ದರೆ, ರಾಜ್ಯದಲ್ಲಿ ರಾಜ್ಯಪಾಲರು ರಾಷ್ಟ್ರಾಧ್ಯಕ್ಷರಿಂದ ಐದು ವರ್ಷದ ಅವಧಿಗಾಗಿ ನೇಮಕಗೊಳ್ಳುತ್ತಾರೆ. ಕೇಂದ್ರದಲ್ಲಿ ರಾಷ್ಟ್ರಾಧ್ಯಕ್ಷರು ಯಾವಾಗಲೂ ನಾಮಮಾತ್ರ ಕಾರ್ಯಾಂಗವಾಗಿದ್ದರೆ, ರಾಜ್ಯಪಾಲರು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿಯ ಕಾಲದಲ್ಲಿ ರಾಷ್ಟ್ರಾಧ್ಯಕ್ಷರ ಆಡಳಿತದಲ್ಲಿ ರಾಜ್ಯದ ನಿಜಕಾರ್ಯಾಂಗವಾಗಿರುತ್ತಾರೆ. ಆದರೂ ಸಾಮಾನ್ಯವಾಗಿ ಅವರು ನಾಮಮಾತ್ರ ಕಾರ್ಯಾಂಗವಾಗಿ ಮಂತ್ರಿಮಂಡಲಗಳ ಸಲಹೆಯ ಮೇರೆಗೆ ಕಾರ್ಯ ನಿರ್ವಹಿಸುತ್ತಾರೆ. ಕೇಂದ್ರದಲ್ಲಿರುವ ಹಾಗೆ ರಾಜ್ಯ ಮಂತ್ರಿಮಂಡಲದ ಮತ್ತು ಸಂಪುಟಗಳು ನಿಜ ಕಾರ್ಯಾಂಗದ ಕೆಲಸ ಮಾಡುತ್ತವೆ. ಇವುಗಳ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ವಹಿಸುತ್ತಾರೆ. ಇವರಿಗೆ ಸಹಾಯ ಮಾಡಲು ಸಂಪುಟ ಸಮಿತಿಗಳು ಸಚಿವಾಲಯಗಳೂ ಇವೆ. ಕೇಂದ್ರದ ಸಂಪುಟಕಾರ್ಯದರ್ಶಿಯ ಸ್ಥಾನದಲ್ಲಿ ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿಗಳಿರುತ್ತಾರೆ. ಇವರೇ ಸಂಪುಟದ ರಾಜ್ಯಮಟ್ಟದಲ್ಲಿ ಸಂಪುಟಕಾರ್ಯದರ್ಶಿಯಾಗಿಯೂ ರಾಜ್ಯದ ಆಡಳಿತ ವ್ಯವಸ್ಥೆಯ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸುತ್ತಾರೆ. ರಾಜ್ಯಗಳ ರಾಜಧಾನಿಯಲ್ಲಿ ಸರ್ಕಾರದ ಆಡಳಿತದಲ್ಲಿ ಸಹಾಯ ಮಾಡಲು ಸಚಿವಾಲಯಗಳಿವೆ. ಈ ಪ್ರತಿಯೊಂದು ಸಚಿವಾಲಯದ ಮುಖ್ಯಸ್ಥರಾಗಿ ಓರ್ವ ಕಾರ್ಯದರ್ಶಿ ಇರುತ್ತಾರೆ. ಕೆಲಸದ ಹೊರೆಗೆ ಅನುಗುಣವಾಗಿ ಸಹಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ವಿಶೇಷ ಕಾರ್ಯದರ್ಶಿಗಳು, ಉಪಕಾರ್ಯದರ್ಶಿಗಳು, ಅಧೀನ ಕಾರ್ಯದರ್ಶಿಗಳು ಮತ್ತು ವಿಭಾಗ ಅಧಿಕಾರಿಗಳು ಇರುತ್ತಾರೆ. ಇವರೆಲ್ಲರ ಸಹಾಯದಿಂದ ರಾಜ್ಯಮಟ್ಟದಲ್ಲಿಯೂ ಸಚಿವಾಲಯದಲ್ಲಿಯೂ ಆಡಳಿತವನ್ನು ಕ್ರೋಡೀಕರಿಸಲಾಗುತ್ತದೆ.

ಅಭಿವೃದ್ಧಿ ಕಾರ್ಯಗಳ ನೀತಿ ನಿರೂಪಿಸುವಲ್ಲಿ ಸಹಾಯ ಮಾಡಲು ರಾಜ್ಯಗಳಲ್ಲಿ ಒಂದು ಯೋಜನಾಮಂಡಲಿಯೂ ರಾಷ್ಟ್ರೀಯ ಅಭಿವೃದ್ಧಿ ಮಂಡಲಿಗೆ ಸಮವಾದ ರಾಜ್ಯಅಭಿವೃದ್ಧಿ ಪರಿಷತ್‍ಗಳೂ ರಚಿಸಲ್ಪಟ್ಟಿವೆ. ಇವು ರಾಜ್ಯದ ಯೋಜನೆ ಮತ್ತು ಅಭಿವೃದ್ಧಿ ವಿಚಾರಗಳನ್ನು ರೂಪಿಸಿ ಚರ್ಚಿಸಿ ಸರ್ಕಾರಕ್ಕೆ ಸಲಹೆ ಮಾಡುತ್ತದೆ.

ಕಾರ್ಯ ನಿರ್ವಾಹಕ ವ್ಯವಸ್ಥೆ : ರಾಜ್ಯಮಟ್ಟದಲ್ಲಿ ಕಾರ್ಯನಿರ್ವಹಿಸಲು ಮುಖ್ಯವಾಗಿ ಇಲಾಖೆಗಳೂ ಮಂಡಲಿಗಳೂ ಆಯೋಗಗಳೂ ಕಚೇರಿಗಳೂ ನಿರ್ದೇಶನಾಲಯಗಳೂ ಇವೆ. ಮುಖ್ಯನಿರ್ವಾಹಕ ಅಂಗಗಳಾದ ಇಲಾಖೆಗಳು ಸರ್ಕಾರದ ನೇರ ಹತೋಟಿಯಲ್ಲಿಯೂ ಮತ್ತಿತರ ಸ್ವಾಯತ್ತ ಸಂಸ್ಥೆಗಳು ವಿವಿಧ ಮಟ್ಟದಲ್ಲಿಯೂ ಕಾರ್ಯನಿರ್ವಹಿಸುತ್ತವೆ. ಏನೇ ಸ್ವಾಯತ್ತತೆ ಇದ್ದರೂ ಈ ಎಲ್ಲ ಸಂಸ್ಥೆಗಳೂ ಒಂದಲ್ಲ ಒಂದು ಸಚಿವ ಖಾತೆಗೆ ಲಗತ್ತಿಸಲ್ಪಟ್ಟು ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ. ಸಚಿವಾಲಯದ ಮಟ್ಟದಲ್ಲಿ ಇಲಾಖೆಗಳನ್ನು ಸಮನ್ವಯಗೊಳಿಸುವ ಕಾರ್ಯ ಕಾರ್ಯದರ್ಶಿಗಳದು.
ರಾಜ್ಯಮಟ್ಟದಲ್ಲಿ ಪ್ರತಿಯೊಂದು ಇಲಾಖೆಗಳೂ ಇತರ ಸಂಸ್ಥೆಗಳಿಗೂ ಪ್ರತ್ಯೇಕವಾಗಿ ಮುಖ್ಯಾಧಿಕಾರಿಗಳು ಅಥವಾ ಮೇಲ್ವಿಚಾರಣೆಯಲ್ಲಿರುವ ಪೊಲೀಸ್ ಇಲಾಖೆಗೆ ಸಚಿವಾಲಯದ ಹೊರಗೆ ಇನ್‍ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಇದ್ದಾರೆ. ಹಾಗೆಯೇ ವ್ಯವಸಾಯ ಇಲಾಖೆಗೆ ವ್ಯವಸಾಯ ನಿರ್ದೇಶಕರಿದ್ದಾರೆ. ಕರ್ನಾಟಕದ ರಾಜ್ಯವಿದ್ಯುತ್ ಇಲಾಖೆಗೆ ಮತ್ತು ರಸ್ತೆಸಾರಿಗೆ ನಿಗಮಕ್ಕೆ ಆಡಳಿತ ಮಂಡಲಿ ಇದೆ. ಇಲಾಖಾ ಮುಖ್ಯಾಧಿಕಾರಿಗಳೂ ಅಥವಾ ಆಡಳಿತ ಮಂಡಲಿಗಳು ಇಲಾಖೆಯ ಅಥವಾ ಇತರ ಸಂಸ್ಥೆಗಳ ಆಂತರಿಕ ಆಡಳಿತದ ಹೊಣೆ ಹೊಂದಿರುತ್ತಾರೆ.
ಕ್ಷೇತ್ರಾಡಳಿತ : ಕಾರ್ಯನಿರ್ವಾಹಕ ವಿಭಾಗಗಳು ಸಾಮಾನ್ಯವಾಗಿ ಕಾನೂನು ಇಲಾಖೆ, ಭಾಷಾಂತರ ಇಲಾಖೆ ಮತ್ತಿತರ ಕೆಲವು ಇಲಾಖೆಗಳನ್ನು ಬಿಟ್ಟರೆ ಆ ರಾಜ್ಯಮಟ್ಟದಲ್ಲಿ ಅಲ್ಲದೆ ರಾಜ್ಯಾದ್ಯಂತ ಕೂಡ ತಮ್ಮ ಆಡಳಿತಾಂಗಗಳನ್ನು ಹೊಂದಿವೆ. ಕಂದಾಯ ಇಲಾಖೆಯಂಥ ಕೆಲವು ಇಲಾಖೆಗಳು ವಿಭಾಗ, ಜಿಲ್ಲಾ, ಉಪವಿಭಾಗಮಟ್ಟದಲ್ಲಿ, ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿಯೂ ಆಡಳಿತ ಕಛೇರಿಗಳನ್ನು ಹೊಂದಿವೆ. ಪೊಲೀಸ್ ಇಲಾಖೆಯಲ್ಲಿ ವಿಭಾಗ, ಉಪವಿಭಾಗ, ಜಿಲ್ಲೆ ತಾಲ್ಲೂಕು. ವೃತ್ತ, ಠಾಣೆ ಮತ್ತು ಔಟ್ ಪೋಸ್ಟ್‍ಗಳೆಂಬ ಕ್ಷೇತ್ರಾಡಳಿತವನ್ನು ರಚಿಸಿಕೊಂಡಿದೆ. ಎಲ್ಲ ರಾಜ್ಯಗಳಲ್ಲೂ ಎಲ್ಲ ಇಲಾಖೆಗಳಲ್ಲೂ ಜಿಲ್ಲಾ ಮಟ್ಟದಲ್ಲಾದರೂ ಕ್ಷೇತ್ರ ಕಛೇರಿಗಳು ಇವೆ. ವಿಭಾಗ ಮಟ್ಟದಲ್ಲಿ ಸಾಮಾನ್ಯವಾಗಿ ರೆವಿನ್ಯೂ ಇಲಾಖೆಯ ಕಛೇರಿಗಳಿರುತ್ತವೆ. ಆದರೆ ಎಲ್ಲ ರಾಜ್ಯಗಳಲ್ಲೂ ವಿಭಾಗಮಟ್ಟದ ಆಡಳಿತ ವ್ಯವಸ್ಥೆ ಇಲ್ಲ. ಕರ್ನಾಟಕ, ಮಧ್ಯಪ್ರದೇಶ ಮುಂತಾದ ಕೆಲವು ರಾಜ್ಯಗಳಲ್ಲಿ ಮಾತ್ರ ಈ ವ್ಯವಸ್ಥೆ ಇದೆ, ವಿಭಾಗದ ಆಡಳಿತ ವ್ಯವಸ್ಥೆ ಇರುವ ಕರ್ನಾಟಕದಲ್ಲಿ ವಿಭಾಗಾಧಿಕಾರಿಗಳಿರುತ್ತಾರೆ.

ರಾಜ್ಯಗಳ ಜಿಲ್ಲಾಮಟ್ಟದ ಆಡಳಿತ ಕ್ಷೇತ್ರಾಡಳಿತದ ಕೇಂದ್ರ ಬಿಂದು. ಸ್ವಾತಂತ್ರ್ಯಪೂರ್ವದ ಆಡಳಿತ ವ್ಯವಸ್ಥೆಯಲ್ಲಿ ಜಿಲ್ಲಾಧಿಕಾರಿಯೇ ಸಮಗ್ರ ಜಿಲ್ಲಾಡಳಿತ ವ್ಯವಸ್ಥೆಯ ಮುಖ್ಯಾಧಿಕಾರಿಯಾಗಿರುತ್ತಿದ್ದರು. ಸ್ವಾತಂತ್ರ್ಯಾ ನಂತರದಲ್ಲಿ ವಿವಿಧ ತಾಂತ್ರಿಕ ಇಲಾಖೆಗಳ ಜಿಲ್ಲಾ ಕಛೇರಿಗಳು ಹೆಚ್ಚಾಗಿ ಅವುಗಳ ಮೇಲ್ವಿಚಾರಣೆಯಲ್ಲಿ ಆಯಾ ಇಲಾಖೆಗಳ ರಾಜ್ಯಮಟ್ಟದ ಮುಖ್ಯಾಧಿಕಾರಿಗಳ ಪಾತ್ರ ಹೆಚ್ಚಾದಂತೆಲ್ಲ ಜಿಲ್ಲಾಧಿಕಾರಿಗಳ ಪಾತ್ರ ಸೀಮಿತಗೊಳ್ಳತೊಡಗಿದೆ. ಆದರೂ ಜಿಲ್ಲಾ ಯೋಜನೆಯ ಮುಖ್ಯ ಸಚೇತಕರಾಗಿ ಜಿಲ್ಲಾ ಕಛೇರಿ ಮತ್ತು ಇತರ ಇಲಾಖೆಗಳ ಕಾರ್ಯ ಸಮನ್ವಯಗೊಳಿಸಲು ಜಿಲ್ಲಾಧಿಕಾರಿಗಳು ಪ್ರಯತ್ನಿಸುತ್ತಾರೆ. ಜಿಲ್ಲಾ ಆಡಳಿತದ ಜೊತೆಗೆ ಜಿಲ್ಲಾ ನ್ಯಾಯಾಧೀಶರಾಗಿ ಕಾನೂನು ಮತ್ತು ಶಿಸ್ತು ಸಮಸ್ಯೆಗಳ ಹೊಣೆಯನ್ನು ಇವರು ಹೊರಬೇಕಾಗಿದೆ. ಈ ಕಾರ್ಯದಲ್ಲಿ ಇವರಿಗೆ ಜಿಲ್ಲಾ ಪೊಲೀಸ್ ಇಲಾಖೆಯ ಮುಖ್ಯಸ್ಥರು ಸಹಾಯಕರಾಗಿರುತ್ತಾರೆ. ಇತರ ಕಾರ್ಯಗಳಲ್ಲಿ ಇವರಿಗೆ ಸಹಾಯಮಾಡಲು ವಿಶೇಷ ಜಿಲ್ಲಾಧಿಕಾರಿಗಳೂ ಜಿಲ್ಲಾ ಹೆಡ್‍ಕ್ವಾರ್ಟರ್ಸ್ ಅಸಿಸ್ಟೆಂಟರೂ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳೂ ಉಪವಿಭಾಗಾಧಿಕಾರಿಗಳೂ ತಾಲ್ಲೂಕು ಆಡಳಿತಗಾರರಾದ ತಹಸೀಲ್ದಾರರುಗಳೂ ಇದ್ದಾರೆ.
ಜಿಲ್ಲಾ ಮಟ್ಟದ ಕೆಳಗೆ ಉಪವಿಭಾಗಾಧಿಕಾರಿಗಳು ಉಪವಿಭಾಗದ ಮುಖ್ಯಸ್ಥರಾಗಿಯೂ ತಹಸೀಲ್ದಾರರು ತಾಲ್ಲೂಕು ಮಟ್ಟದ ಕಂದಾಯ ಮತ್ತು ಮ್ಯಾಜಿಸ್ಟ್ರೇಟ್ ಅಧಿಕಾರಿಗಳಾಗಿಯೂ ಕಾರ್ಯ ನಿರ್ವಹಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲು ಕ್ಷೇತ್ರಾಭಿವೃದ್ಧಿ ಅಧಿಕಾರಿಗಳು ತಾಲ್ಲೂಕು ಮಟ್ಟದಲ್ಲಿ ಇದ್ದಾರೆ. ಗ್ರಾಮಗಳ ಮಟ್ಟದಲ್ಲಿ ಗ್ರಾಮಸೇವಕರು, ಗ್ರಾಮಲೆಕ್ಕಿಗರು ಕಾರ್ಯನಿರ್ವಹಿಸುತ್ತಾರೆ.

ಸಿಬ್ಬಂದಿವ್ಯವಸ್ಥೆ : ರಾಜ್ಯಗಳ ಆಡಳಿತದಲ್ಲೂ ಐ.ಎ.ಎಸ್. ಅಧಿಕಾರಿಗಳದೇ ಮೇಲುಗೈ. ಸಚಿವಾಲಯದಲ್ಲಿ ಮುಖ್ಯಕಾರ್ಯದರ್ಶಿಗಳಿಂದ ಸಹಾಯಕ ಕಾರ್ಯದರ್ಶಿಗಳ ಹುದ್ದೆಗಳಿಗೂ ರಾಜ್ಯದ ವಿಭಾಗಾಧಿಕಾರಿಗಳ ಹಾಗೂ ಜಿಲ್ಲಾಧಿಕಾರಿಗಳ ಮತ್ತು ವಿವಿಧ ಇಲಾಖೆ ಮತ್ತು ಮಂಡಲಿಗಳ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಹುದ್ದೆಗಳಿಗೂ ಐ.ಎ.ಎಸ್. ಅಧಿಕಾರಿಗಳನ್ನೆ ನೇಮಿಸುವುದುಂಟು. ಕೇಂದ್ರ ಸರ್ಕಾರದ ಆಡಳಿತದಂತೆ ಪ್ರತಿ ರಾಜ್ಯದಲ್ಲೂ ನಾಲ್ಕು ವರ್ಗದ ಸಿಬ್ಬಂದಿಗಳುಂಟು. ಹಾಗೆಯೇ ರಾಜ್ಯಮಟ್ಟದಲ್ಲೂ ಗೆಜೆಟೆಡ್ ಮತ್ತು ನಾನ್ ಗೆಜೆಟೆಡ್ ವರ್ಗೀಕರಣ ವಿದೆ.
ರಾಜ್ಯ ಆಡಳಿತ ಸೇವೆಗಳ ಸಿಬ್ಬಂದಿ ನೇಮಕ ಮತ್ತು ನಿರ್ವಹಣೆ ಕೆಲಸ ಮೊದಲು ಗೃಹಖಾತೆಯ ಜವಾಬ್ದಾರಿಯಾಗಿದ್ದು ಇತ್ತೀಚೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಜವಾಬ್ದಾರಿಯಾಗಿದೆ. ಸಿಬ್ಬಂದಿಯ ನೇಮಕಾತಿಯಲ್ಲಿ ಸಂವಿಧಾನಬದ್ಧವಾಗಿ ನೇಮಿಸಲ್ಪಟ್ಟಿರುವ ರಾಜ್ಯ ಲೋಕಸೇವಾ ಆಯೋಗಗಳು ಕೆಲಸ ಮಾಡುತ್ತಿವೆ. ಸಿಬ್ಬಂದಿ ನೀತಿಯ ಬಗ್ಗೆ ಸರ್ಕಾರಕ್ಕೆ ಈ ಆಯೋಗಗಳು ಸಲಹೆ ನೀಡುತ್ತವೆ. ರಾಜ್ಯಗಳಲ್ಲಿ ಇತ್ತೀಚೆಗೆ ಸಿಬ್ಬಂದಿ ತರಬೇತಿಯ ಬಗ್ಗೆ ಹೆಚ್ಚು ಗಮನ ದೊರೆತು ಅನೇಕ ತರಪೇತಿ ಸಂಸ್ಥೆಗಳು ಸ್ಥಾಪಿಸಲ್ಪಟ್ಟಿವೆ.

ನಿಯಂತ್ರಣ ವ್ಯವಸ್ಥೆ: ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯೇ ರಾಜ್ಯಗಳಲ್ಲೂ ಇರುವುದರಿಂದ, ಕೇಂದ್ರಾಡಳಿತ ವ್ಯವಸ್ಥೆಯಂತೆಯೇ ಇಲ್ಲಿಯ ಆಡಳಿತ ವ್ಯವಸ್ಥೆಯೂ ಇದೆ. ರಾಜ್ಯಗಳ ಮಟ್ಟದಲ್ಲೂ ಆಡಳಿತ ಮಂತ್ರಿಮಂಡಲ ಶಾಸಕಾಂಗ, ನ್ಯಾಯಾಂಗ ಮತ್ತು ಪ್ರಜಾನಿಯಂತ್ರಣಗಳಿಗೆ ಒಳಪಟ್ಟಿದೆ. ಕೇಂದ್ರ ಮತ್ತು ರಾಜ್ಯಗಳಿಗೆ ನಿಯಂತ್ರಣ ಮತ್ತು ಪ್ರಧಾನ ಲೆಕ್ಕಪರಿಶೋಧಕರ ನಿಯಂತ್ರಣ ಒಂದೇ ಆಗಿದೆ. ಆಡಳಿತದ ಲೆಕ್ಕನಿಯಂತ್ರಣ ಮತ್ತು ಪರಿಶೋಧನೆ ನಡೆಸಲು ಪ್ರತಿ ರಾಜ್ಯದಲ್ಲೂ ಒಬ್ಬೊಬ್ಬಪ್ರಧಾನ ಲೆಕ್ಕಾಧಿಕಾರಿಗಳ ಕಛೇರಿಗಳು ಇವೆ. ಪ್ರಧಾನ ಲೆಕ್ಕಾಧಿಕಾರಿಗಳು ರಾಜ್ಯದ ಆಯವ್ಯಯವನ್ನು ನಿಯಂತ್ರಿಸಿ ವಾರ್ಷಿಕವಾಗಿ ಪರಿಶೋಧನೆ ನಡೆಸಿ ವರದಿ ತಯಾರಿಸಿ ರಾಜ್ಯಪಾಲರ ಮೂಲಕ ವಿಧಾನ ಸಭೆಗೆ ಒಪ್ಪಿಸುತ್ತಾರೆ. ಕೇಂದ್ರ ಸಂಸತ್ತಿನ ಹಾಗೆ ವಿಧಾನ ಮಂಡಲದಲ್ಲೂ ಇರುವ ಸಂಬಂಧಪಟ್ಟ ಸಮಿತಿಗಳು ಮೇಲ್ಕಂಡ ವರದಿಯನ್ನು ಕೂಲಂಕಷವಾಗಿ ಚರ್ಚಿಸಿ ಮತ್ತು ವಿಚಾರಣೆ ನಡೆಸಿ ವಿಧಾನಮಂಡಲಕ್ಕೆ ವರದಿ ಸಲ್ಲಿಸುತ್ತವೆ. ಈ ವರದಿಯ ಮೇಲೆ ವಿಧಾನ ಮಂಡಲ ಯುಕ್ತ ಕ್ರಮ ತೆಗೆದುಕೊಳ್ಳುತ್ತದೆ. ರಾಜ್ಯಸರ್ಕಾರದಿಂದ ಧನ ಸಹಾಯ ಪಡೆಯುವ ಸಂಸ್ಥೆಗಳ ಮತ್ತು ಸ್ಥಳೀಯ ಸಂಸ್ಥೆಗಳ ಆಯವ್ಯಯವನ್ನೂ ರಾಜ್ಯಸರ್ಕಾರದ ಲೆಕ್ಕನಿಯಂತ್ರಣ ಮತ್ತು ಪರಿಶೋಧನಾ ಇಲಾಖೆ ನಿಯಂತ್ರಿಸಿ ಪರಿಶೋಧಿಸುತ್ತದೆ.

ಗ್ರಾಮ ಮತ್ತು ನಗರಾಡಳಿತ : ಭಾರತದ ಗ್ರಾಮ ಮತ್ತು ನಗರಾಡಳಿತ ವ್ಯವಸ್ಥೆಗೆ ಸಹಸ್ರಾರು ವರ್ಷಗಳ ಹಿನ್ನೆಲೆ ಇದೆ. ಗ್ರಾಮ ಪಂಚಾಯಿತಿಗಳು. ಗ್ರಾಮಾಧಿಕಾರಿಗಳು ಮತ್ತು ಕೊತ್ವಾಲ ಮುಂತಾದ ಆಡಳಿತಗಾರರು ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ನಡೆಸಿಕೊಂಡು ಬಂದಿದ್ದಾರೆ. ಸ್ವಾತಂತ್ರ್ಯಾನಂತರದಲ್ಲಿ ಅಭಿವೃದ್ಧಿಕಾರ್ಯಗಳ ಮತ್ತು ಸ್ಫೋಟಗೊಳ್ಳುತ್ತಿರುವ ಜನಸಂಖ್ಯೆಯ ಒತ್ತಡಗಳಿಂದ ಹಾಗೂ ಪ್ರಜಾಪ್ರಭುತ್ವದ ಪರಿಣಾಮವಾಗಿ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಅನೇಕ ಬೆಳವಣಿಗೆಗಳಾಗಿವೆ.

ಪಂಚಾಯಿತಿ ರಾಜ್ಯ: ಗ್ರಾಮಸ್ವರಾಜ್ಯದ ಕನಸು ಕಂಡ ಗಾಂಧೀವಾದ, ಕೇಂದ್ರ ಮತ್ತು ರಾಜ್ಯಗಳಲ್ಲಿ 1950ರಿಂದೀಚೆಗೆ ಕಾರ್ಯರೂಪಕ್ಕೆ ಬಂದ ಪ್ರಜಾರಾಜ್ಯವನ್ನು ಸ್ಥಳೀಯ ಗ್ರಾಮಗಳಿಗೂ ವಿಸ್ತರಿಸಬೇಕೆಂಬ ನಿರ್ಧಾರದಿಂದ ಮತ್ತು ಗ್ರಾಮಾಭಿವೃದ್ಧಿಯ ಯೋಜನಾವ್ಯವಸ್ಥೆಯಲ್ಲಿ ಪಾಲುಗೊಳ್ಳಲು ಗ್ರಾಮಸ್ಥರಿಗೆ ಯುಕ್ತ ಅವಕಾಶವೀಯುವ ದೃಷ್ಟಿಯಿಂದ 1959ರಿಂದೀಚೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಪಂಚಾಯಿತಿ ರಾಜ್ಯ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಗ್ರಾಮದಿಂದ ಹಿಡಿದು ಜಿಲ್ಲೆಯವರೆಗೆ ಸಾಮಾನ್ಯವಾಗಿ ಮೂರು ಹಂತಗಳ ಒಂದು ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಪಂಚಾಯಿತಿ ರಾಜ್ಯ ಎಂದು ಕರೆಯಲಾಗಿದೆ. ಗ್ರಾಮ ಮಟ್ಟದಲ್ಲಿ ಗ್ರಾಮಪಂಚಾಯಿತಿ ಎಂದೂ ತಾಲ್ಲೂಕು ಅಥವಾ ವಿಭಾಗ ಮಟ್ಟದಲ್ಲಿ ಪಂಚಾಯಿತಿ ಸಮಿತಿ ಅಥವಾ ತಾಲ್ಲೂಕು ಅಭಿವೃದ್ಧಿ ಮಂಡಲಿ ಎಂದೂ ಜಿಲ್ಲಾಮಟ್ಟದ ಜಿಲ್ಲಾ ಪರಿಷದ್ ಅಥವಾ ಜಿಲ್ಲಾ ಅಭಿವೃದ್ಧಿ ಮಂಡಲಿಯೆಂದೂ ಸಾಮಾನ್ಯವಾಗಿ ಕರೆಯುವ ಈ ಗ್ರಾಮೀಣ ಸ್ಥಳೀಯ ಆಡಳಿತಾಂಗಗಳು ಕೇಂದ್ರ ಸರ್ಕಾರದ ಶಿಫಾರ್ಸಿನ ಮೇಲೆ ರಾಜ್ಯ ಸರ್ಕಾರಗಳ ಶಾಸನ ಮೂಲಕ ಅನೇಕ ರಾಜ್ಯಗಳಲ್ಲಿ ರಚಿಸಲ್ಪಟ್ಟಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳಾದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಮುಂತಾದ ಅನೇಕ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಈ ಪಂಚಾಯಿತಿ ರಾಜ್ಯ ಆಡಳಿತ ವ್ಯವಸ್ಥೆ ಅನುಕೂಲವಾಗಿದೆ. ಆದರೂ ಹಣಕಾಸಿನ ಅಭಾವ, ಅಲ್ಪ ಅಧಿಕಾರ ವಿಕೇಂದ್ರೀಕರಣ ಮತ್ತು ಸ್ಥಳೀಯ ರಾಜಕೀಯಗಳಿಂದಾಗಿ ಈ ವ್ಯವಸ್ಥೆ ಹೆಚ್ಚು ಅಭಿವೃದ್ಧಿ ತೋರುತ್ತಿಲ್ಲ. 

ನಗರಾಡಳಿತ ವ್ಯವಸ್ಥೆ : ಈಚಿನ ದಿನಗಳಲ್ಲಿ ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆಯಿಂದಾಗಿ ನಗರಗಳ ಗಾತ್ರ ಮತ್ತು ಜನಸಂಖ್ಯೆ ಅತಿಯಾಗಿ ನಗರಗಳ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ನಗರಗಳ ಆರೋಗ್ಯ ಮತ್ತು ನೈರ್ಮಲ್ಯ, ವಸತಿ, ಸಾರಿಗೆ ಮುಂತಾದ ಸಮಸ್ಯೆಗಳು ಹೆಚ್ಚುತ್ತಿವೆ. ಈ ಸಮಸ್ಯೆಗಳಿಗೆ ಸ್ಥಳೀಯ ಶಕ್ತಿಸಂಪನ್ಮೂಲಗಳು ಸಾಲದೆ, ಇಂದು ರಾಜ್ಯ ಸರ್ಕಾರಗಳೂ, ಕೇಂದ್ರಸರ್ಕಾರ ಮತ್ತು ವಿಶ್ವಸಂಸ್ಥೆಯೂ ತಮ್ಮ ಗಮನ ಹರಿಸಿವೆ.
ಜನಸಂಖ್ಯೆಗೆ ಅನುಗುಣವಾಗಿ ಪಟ್ಟಣ ನಗರಾಡಳಿತವನ್ನು ಟೌನ್ ಪಂಚಾಯಿತಿಗಳು, ನಗರ ಸಭೆಗಳು ಮತ್ತು ಕಾರ್ಪೊರೇಷನ್‍ಗಳೂ ನಡೆಸುತ್ತವೆ. ಈ ಸ್ಥಳೀಯ ಆಡಳಿತಾಂಗಗಳು ತಮ್ಮ ಸ್ವಂತ ಸಂಪನ್ಮೂಲಗಳು ಮತ್ತು ರಾಜ್ಯ ಸರ್ಕಾರದ ಆಡಳಿತಾಂಗಗಳು ತಮ್ಮ ಸ್ವಂತ ಸಂಪನ್ಮೂಲಗಳು ಮತ್ತು ರಾಜ್ಯ ಸರ್ಕಾರದ ಧನಸಹಾಯದಿಂದ ಆಯವ್ಯಯ ತೂಗಿಕೊಳ್ಳುವುವು. ಇತೀಚಿನ ದಿನಗಳಲ್ಲಿ ನಗರಾಭಿವೃದ್ಧಿ ಮಂಡಲಿಗಳು, ನಗರ ಒಳಚರಂಡಿ ಮತ್ತು ನೀರು ಸರಬರಾಜು ಮಂಡಲಿಗಳು, ನಗರ ಕೊಳಚೆ ಪ್ರದೇಶ ನಿರ್ಮೂಲನ ಮಂಡಲಿ ಮುಂತಾದವು ಇವೆ. ಆದರೆ ಒಂದೇ ನಗರದಲ್ಲಿ ಅನೇಕ ಸಂಸ್ಥೆಗಳು ಕಾರ್ಯಾಚರಣೆ ಮಾಡುವುದರಿಂದ ಇವುಗಳ ಸಮನ್ವಯದ ಒಂದು ಹೊಸ ಸಮಸ್ಯೆ ಉದ್ಭವಿಸಿದೆ. ಆದ್ದರಿಂದ ಬೃಹತ್ ನಗರಗಳ ಮಟ್ಟಿಗಾದರೂ ಈ ಸಮನ್ವಯ ಸಾಧಿಸಲು ಮೆಟ್ರೊಪಾಲಿಟನ್ (ಮಹಾನಗರ) ಸಮಿತಿಗಳು ಅಥವಾ ಅಭಿವೃದ್ಧಿ ಪ್ರಾಧಿಕಾರಗಳನ್ನು ಸ್ಥಾಪಿಸಲಾಗಿದೆ.

ಗ್ರಾಮಾಂತರ ಪಂಚಾಯಿತಿ ರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ನೇರವಾಗಿ ಚುನಾಯಿಸಲ್ಪಟ್ಟ ಗ್ರಾಮಪಂಚಾಯಿತಿ ಸಭೆಗಳು, ಅವುಗಳ ಅಧ್ಯಕ್ಷರು ಮತ್ತು ಸಮಿತಿಗಳು ಇವೆ. ತಾಲ್ಲೂಕು ಅಥವಾ ಬ್ಲಾಕ್ ಮಟ್ಟದಲ್ಲಿ ಪರೋಕ್ಷವಾಗಿ ಅಥವಾ ಕೆಲವು ರಾಜ್ಯಗಳಲ್ಲಿ ನೇರವಾಗಿಯೇ ಚುನಾಯಿಸಲ್ಪಟ್ಟ ಪಂಚಾಯತ್ ಸಮಿತಿ ಅಥವಾ ತಾಲ್ಲೂಕ್ ಅಭಿವೃದ್ಧಿ ಮಂಡಲಿಗಳೂ ಪರೋಕ್ಷವಾಗಿ ಚುನಾಯಿಸಲ್ಪಟ್ಟ ಇವುಗಳ ಅಧ್ಯಕ್ಷರೂ ಮತ್ತು ಸಮಿತಿಗಳೂ ಇವೆ. ಜಿಲ್ಲಾ ಮಟ್ಟದಲ್ಲಿ ಪರೋಕ್ಷವಾಗಿ ಅಥವಾ ನೇರವಾಗಿ ಚುನಾಯಿಸಲ್ಪಟ್ಟ ಅಥವಾ ಸರ್ಕಾರದಿಂದ ನೇಮಿಸಲ್ಪಟ್ಟ ಸದಸ್ಯರುಳ್ಳ ಜಿಲ್ಲಾ ಪರಿಷದ್‍ಗಳು ಅಥವಾ ಜಿಲ್ಲಾ ಅಭಿವೃದ್ಧಿ ಮಂಡಲಿಗಳಿವೆ. ಇವುಗಳಿಗೆ ಸಾಮಾನ್ಯವಾಗಿ ಪರೋಕ್ಷವಾಗಿ ಚುನಾಯಿಸಲ್ಪಟ್ಟ ಅಧ್ಯಕ್ಷರು ಕೆಲವು ರಾಜ್ಯಗಳಲ್ಲಿದ್ದಾರೆ. ಇನ್ನು ಕೆಲವು ರಾಜ್ಯಗಳಲ್ಲಿ ಜಿಲ್ಲಾಧಿಕಾರಿಗಳೇ ನೇಮಿತ ಅಧ್ಯಕ್ಷರಾಗಿರುತ್ತಾರೆ.

ನಗರಾಡಳಿತ ವ್ಯವಸ್ಥೆಯಲ್ಲಿ ನೇರವಾಗಿ ಚುನಾಯಿಸಲ್ಪಟ್ಟ ಪಟ್ಟಣ ಪಂಚಾಯಿತಿಗಳು ಅಥವಾ ನಗರ ಸಮಿತಿಗಳು ಅಥವಾ ನಗರ ಸಭೆಗಳೆಂಬ ಪ್ರತಿನಿಧಿ ಸಭೆಗಳಿವೆ. ಸಾಮಾನ್ಯವಾಗಿ ಪರೋಕ್ಷವಾಗಿ ಚುನಾಯಿಸಲ್ಪಟ್ಟ ಇವುಗಳ ಅಧ್ಯಕ್ಷರು ನೀತಿನಿರೂಪಣೆಯಲ್ಲೂ ಕಾರ್ಯನಿರ್ವಹಣೆಯಲ್ಲೂ ನಾಯಕತ್ವ ವಹಿಸುತ್ತಾರೆ. ಅಭಿವೃದ್ಧಿ ಪ್ರಾಧಿಕಾರ ಮುಂತಾದ ವಿಶೇಷ ಸಂಸ್ಥೆಗಳು ಸಾಮಾನ್ಯವಾಗಿ ಸರ್ಕಾರದಿಂದ ನೇಮಿತ ಮಂಡಲಿಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಅಧಿಕಾರೇತರರು ಇವುಗಳ ಅಧ್ಯಕ್ಷರಾಗಿರುತ್ತಾರೆ.

ಗ್ರಾಮೀಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವುದರಲ್ಲಿ ಅಧ್ಯಕ್ಷರುಗಳಿಗೆ ಸಹಾಯ ಮಾಡಲು ಗ್ರಾಮಮಟ್ಟದಲ್ಲಿ ಪಂಚಾಯಿತಿ ಕಾರ್ಯದರ್ಶಿ, ತಾಲ್ಲೂಕು ಮಟ್ಟದಲ್ಲಿ ಮುಖ್ಯ ಕಾರ್ಯನಿರ್ವಾಹಣಾಕಾರಿಗಳಾಗಿ ಕ್ಷೇತ್ರಾಭಿವೃದ್ಧಿಕಾರಿಗಳು ಮತ್ತು ಅವರ ಜೊತೆಯಲ್ಲಿರುವ ಅನೇಕ ವಿಸ್ತರಣಾಧಿಕಾರಿಗಳು; ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಅಭಿವೃದ್ಧಿ ಸಹಾಯಕರು, ಅಥವಾ ಜಿಲ್ಲಾ ಪರಿಷತ್ ಪ್ರಬಲವಾಗಿರುವಂಥ ಮಹಾರಾಷ್ಟ್ರದಂಥ ರಾಜ್ಯಗಳಲ್ಲಿ ಜಿಲ್ಲಾಧಿಕಾರಿಗಳ ಸ್ಥಾನಕ್ಕೆ ಸಮವಾದ ಸ್ಥಾನ ಹೊಂದಿರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೂ ಇದ್ದಾರೆ.
ನಗರಾಡಳಿತದಲ್ಲಿ ಸರ್ಕಾರದಿಂದ ನೇಮಿಸಲಾದ ಮುಖ್ಯ ಕಾರ್ಯನಿರ್ವಣಾಧಿಕಾರಿಗಳು, ನಗರಾಡಳಿತ ಮಂಡಲಿಗಳು ಮತ್ತು ನಿಗಮಗಳಲ್ಲಿ ಕಮಿಷನರ್ ಎಂಬ ಅಧಿಕಾರಿ ಇರುತ್ತಾರೆ. ಕಮಿಷನರುಗಳು ಸಾಮಾನ್ಯವಾಗಿ ಐ.ಎ.ಎಸ್. ಅಧಿಕಾರಿಗಳು. ಇವರಲ್ಲದೆ ತಜ್ಞ ಅಧಿಕಾರಿಗಳೂ ಇರುವರು. ಇತರ ವಿಶೇಷ ಮಂಡಲಿಗಳಿಗೆ ಕಾರ್ಯದರ್ಶಿಗಳೆಂಬ ಆಡಳಿತಾಧಿಕಾರಿಗಳು ಮತ್ತು ತಜ್ಞ ಅಧಿಕಾರಿಗಳು ಇರುತ್ತಾರೆ.

ಸಿಬ್ಬಂದಿ ವ್ಯವಸ್ಥೆ: ರಾಜ್ಯ ಸರ್ಕಾರಗಳಿಂದ ನೇಮಿಸಲ್ಪಡುವ ಅಧಿಕಾರಿಗಳೆಲ್ಲರೂ ರಾಜ್ಯಸರ್ಕಾರದ ನೌಕರರು, ಸ್ಥಳೀಯ ಸರ್ಕಾರಗಳಲ್ಲಿ ಉನ್ನತ ಸ್ಥಾನಗಳಲ್ಲಿ ಐ.ಎ.ಎಸ್. ಅಧಿಕಾರಿಗಳೂ ಮಾಧ್ಯಮ ಆಡಳಿತ ಸ್ಥಾನಗಳಲ್ಲಿ ರಾಜ್ಯ ಆಡಳಿತ ಮತ್ತು ತಾಂತ್ರಿಕ ಸೇವೆಗಳ ಅಧಿಕಾರಿಗಳೂ ಇರುತ್ತಾರೆ. ಕೆಲವು ಮಧ್ಯಮ ಸ್ಥಾನಗಳಿಗೂ ಮತ್ತಿತರ ಸ್ಥಾನಗಳಿಗೂ ಸ್ಥಳೀಯ ಆಡಳಿತ ಸೇವೆಗಳ ವರ್ಗದ ಅಧಿಕಾರಿಗಳೂ ಇರುತ್ತಾರೆ. ಕೆಳದರ್ಜೆಯ ಕೆಲಸಗಳಿಗೆ ಸ್ಥಳೀಯ ಸಂಸ್ಥೆಗಳೇ ನೇಮಕಾತಿ ಮಾಡುವ ನೌಕರ ವರ್ಗದವರಿದ್ದಾರೆ. ಆಡಳಿತ ಮತ್ತು ತಾಂತ್ರಿಕ ಅಧಿಕಾರವೆಲ್ಲ ರಾಜ್ಯಸರ್ಕಾರದ ಸೇವೆಗಳ ವಿಭಾಗದವರಿಗೆ ಸೇರಿರುತ್ತದೆ.

ನಿಯಂತ್ರಣ ವ್ಯವಸ್ಥೆ : ಸ್ಥಳೀಯ ಆಡಳಿತಾಂಗಗಳು ಶಾಸನಬದ್ಧವಾಗಿ ರಾಜ್ಯ ಸರ್ಕಾರಗಳಿಂದಲೇ ರಚಿಸಲ್ಪಟ್ಟವಾದ್ದರಿಂದ ಅವುಗಳ ಮೇಲೆ ರಾಜ್ಯ ಸರ್ಕಾರದ ನಿಯಂತ್ರಣ ಪ್ರಬಲವಾಗಿದೆ. ಸ್ಥಳೀಯ ಆಡಳಿತಾಂಗಗಳ ಸ್ವಾಯತ್ತತೆಗೆ ಒಂದು ಮಿತಿ ಇದೆ. ರಾಜ್ಯ ಸರ್ಕಾರದ ನಿಯಂತ್ರಣ ಪ್ರಬಲವಾಗಿದೆ. ಸ್ಥಳೀಯ ಆಡಳಿತಾಂಗಗಳ ಸ್ವಾಯತ್ತತೆಗೆ ಒಂದು ಮಿತಿ ಇದೆ. ರಾಜ್ಯ ಸರ್ಕಾರಗಳು ಸಂಬಂಧಿಸಿದ ಮುಖ್ಯ ಇಲಾಖೆಗಳ ಮತ್ತು ನಗರಾಡಳಿತ ಇಲಾಖೆಗಳ ಸಹಾಯದಿಂದ ಇವನ್ನು ನಿಯಂತ್ರಿಸುತ್ತವೆ. ಕರ್ನಾಟಕದಲ್ಲಿ ಪಂಚಾಯಿತಿ ರಾಜ್ಯಕಾನೂನು (1959) ಮತ್ತು ವಿವಿಧ ನಗರಾಡಳಿತ ಕಾನೂನುಗಳ ಅನ್ವಯ ರಾಜ್ಯ ಸರ್ಕಾರ ನಿಯಂತ್ರಣಾಧಿಕಾರವನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳಿಗೂ ವಿಭಾಗ ಮಟ್ಟದಲ್ಲಿ ವಿಭಾಗಾಧಿಕಾರಿಗಳಿಗೂ ನೀಡಿದೆ. ಕೆಲವು ರಾಜ್ಯಗಳಲ್ಲಿ ಪ್ರತ್ಯೇಕವಾದ ನಗರಾಡಳಿತ ನಿರ್ದೇಶನಾಲಯಗಳು ತಮ್ಮದೇ ಆದ ಕ್ಷೇತ್ರಾಡಳಿತದ ಮೂಲಕ ಸ್ಥಳೀಯ ಸರ್ಕಾರಗಳನ್ನು ನಿಯಂತ್ರಿಸುತ್ತವೆ. ಇವುಗಳಲ್ಲದೆ, ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆ ತನ್ನ ಸ್ಥಳೀಯ ಲೆಕ್ಕ ಪರಿಶೋಧಕರ ನಿಯಂತ್ರಿಸಿ ಮತ್ತು ಪರಿಶೋಧಿಸಿ ರಾಜ್ಯ ಸರ್ಕಾರದ ಮೂಲಕ ಸಂಬಂಧಪಟ್ಟ ಸ್ಥಳೀಯ ಸಭೆಗಳಿಗೆ ವರದಿಗಳನ್ನು ಒಪ್ಪಿಸುತ್ತದೆ. ಈ ಸಭೆಗಳು ಇದರ ಮೇಲೆ ಅಗತ್ಯವಿದ್ದಾಗ ಕ್ರಮ ಜರಗಿಸುತ್ತವೆ. ಇಲ್ಲದಿದ್ದಲ್ಲಿ ರಾಜ್ಯಸರ್ಕಾರ ಅಥವಾ ಅದರಿಂದ ಅಧಿಕಾರ ಪಡೆದ ಅಧಿಕಾರಿಗಳು ಯುಕ್ತ ಕ್ರಮ ಜರಗಿಸುತ್ತಾರೆ.

ಭಾರತದಲ್ಲಿ ಆಡಳಿತ ಸುಧಾರಣೆಗಳು : ಸ್ವಾತಂತ್ರ್ಯ ಬಂದ ಮೇಲೆ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಮತ್ತು ಅಭಿವೃದ್ಧಿ ಕಾರ್ಯಗಳ ಆವಶ್ಯಕತೆಗಳಿಗೆ ತಕ್ಕಂತೆ ಆಡಳಿತವನ್ನು ಅನೇಕ ಸುಧಾರಣಾ ಸಮಿತಿಗಳ, ತಜ್ಞರ ಮತ್ತು ಆಯೋಗಗಳ ವರದಿಯ ಮೇಲೆ ಆಡಳಿತದಲ್ಲಿ ಅನೇಕ ಸುಧಾರಣೆಗಳನ್ನು ಮಾಡಲಾಗಿದೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ಈ ಆಡಳಿತವನ್ನು ನಿರಂತರವಾಗಿ ಪರಿಶೋಧಿಸಿ, ಪರಿಶೀಲಿಸಿ ಸುಧಾರಣೆಗಳನ್ನು ತರಲು 1964ರಲ್ಲಿ ಆಡಳಿತ ಸುಧಾರಣಾ ಇಲಾಖೆ ಎಂಬ ಖಾಯಂ ಮತ್ತು ಪ್ರತ್ಯೇಕ ಇಲಾಖೆ ಒಂದನ್ನು ರಚಿಸಲಾಯಿತು. 1966ರಲ್ಲಿ ಉನ್ನತ ಮಟ್ಟದ ಮತ್ತು ಸಮಗ್ರ ಆಡಳಿತ ಸುಧಾರಣೆಯನ್ನು ಶಿಫಾರ್ಸು ಮಾಡಲೆಂದು ಉನ್ನತಾಧಿಕಾರದ ಆಡಳಿತ ಸುಧಾರಣಾ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗ 1970ರ ತನಕ ಕೆಲಸಮಾಡಿ 20 ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿತು.

ಇವೆಲ್ಲ ಪ್ರಯತ್ನಗಳಿಂದಾಗಿ ಭಾರತದ ಆಡಳಿತದಲ್ಲಿ ಅನೇಕ ನೂತನ ಕಾರ್ಯಕ್ರಮಗಳು ಜಾರಿಗೆ ಬಂದು ಅನೇಕ ಸುಧಾರಣೆಗಳೂ ಆಗಿವೆ. ರಾಷ್ಟ್ರೀಯ ಯೋಜನಾ ಮಂಡಲಿ, ರಾಷ್ಟ್ರೀಯ ಅಭಿವೃದ್ಧಿ ಮಂಡಲಿ, ವಿಜಿಲೆನ್ಸ್ ಕಮಿಷನ್, ವಿವಿಧ ಅಭಿವೃದ್ಧಿ ನಿಗಮಗಳು, ಮಂಡಲಿಗಳು ಮತ್ತು ಪ್ರಾಧಿಕಾರಗಳು ಇವುಗಳಲ್ಲಿ ಮುಖ್ಯವಾದವು.

ಒಟ್ಟಿನಲ್ಲಿ ಭಾರತದ ಆಡಳಿತ ರಾಷ್ಟ್ರದ ಏಕತೆ, ಕಾನೂನು ಮತ್ತು ಶಾಂತಿ ಪಾಲನೆಯನ್ನು ಸಾಕಷ್ಟು ದಕ್ಷವಾಗಿಯೇ ಕಾಪಾಡಿಕೊಂಡು ಬಂದಿದೆಯೆನ್ನಬಹುದು. ಈ ಆಡಳಿತ ಅನೇಕ ಹೊಸ ಅಭಿವೃದ್ಧಿ ಯೋಜನೆಗಳನ್ನೂ ಕಾರ್ಯಕ್ರಮಗಳನ್ನು ರೂಪಿಸಿದೆ. ಭಾರತದ ಆಡಳಿತಕ್ಕೆ ಹಣದ ಅಭಾವವಿಲ್ಲ ಸಾರ್ವಜನಿಕ ಲೆಕ್ಕಾಚಾರ ಸಮಿತಿಗಳ ವರದಿಗಳನ್ನು ಪರಿಶೀಲಿಸಿದರೆ, ಅನುಮೋದಿಸಿದ ಹಣದಲ್ಲಿ ಬಲುಪಾಲು ವೆಚ್ಚ ಮಾಡದೇ ಹಣ ಉಳಿಯುವ ಅನೇಕ ಸಂದರ್ಭಗಳು ಕಂಡು ಬರುತ್ತವೆ. ಇದ್ದರಿಂದ ಆಡಳಿತದ ಗುರಿಸಾಧನೆ ಅಪೂರ್ಣವಾಗುತ್ತದೆ. ಆದರೆ ಬರಿಯ ಹಣವೆಚ್ಚ ಒಂದೇ ಏಳಿಗೆಯ ಮಾನದಂಡವಲ್ಲವೆಂದು ಕೆಲವರು ಹೇಳುವುದುಂಟು. ಆಡಳಿತದಲ್ಲಿ ರಾಜಕಾರಣಿಗಳ ಅನಾವಶ್ಯಕ ಪ್ರವೇಶ, ರಾಜಕಾರಣ ಮತ್ತು ಆಡಳಿತ ಎರಡರಲ್ಲೂ ತುಂಬಿತುಳುಕುವ ಲಂಚ ಭ್ರಷ್ಟಾಚಾರ, ಪಕ್ಷಪಾತ, ನಿಧಾನ ಪ್ರವೃತ್ತಿ ಇವು ಆಡಳಿತದ ದಕ್ಷತೆಗೆ, ವೈಚಾರಿಕ ನಡವಳಿಕೆಗೆ, ನಿಷ್ಪಕ್ಷಪಾತತೆಗೆ ಮಾರಕವಾಗಿವೆ.
(ಎಂ.ಯು.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ